ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ: ಆರ್‌.ಅಶೋಕ್

Public TV
2 Min Read

-‌ ಕೃಷ್ಣಮೃಗಗಳ ಸಾವಿನ ಬಗ್ಗೆ ಅರಣ್ಯ ಸಚಿವರು ಉತ್ತರ ನೀಡಬೇಕಿದೆ ಎಂದ ವಿಪಕ್ಷ ನಾಯಕ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೇಳಿದ ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗುತ್ತಿರುವುದೇಕೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ನಾನು ಪದೇ ಪದೆ ಹೇಳಿದ್ದೆ. ಆದರೂ ಆ ರೀತಿ ಇಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಈಗ ಡಿ.ಕೆ.ಶಿವಕುಮಾರ್‌ ಸೋದರರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಸಿಎಂ ಬದಲಾವಣೆ ಇಲ್ಲವೆಂದ ಮೇಲೆ ಎಲ್ಲರೂ ಮಲ್ಲಿಕಾರ್ಜುನ ಖರ್ಗೆಯನ್ನು ಏಕೆ ಭೇಟಿಯಾಗುತ್ತಿದ್ದಾರೆ? ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ, ವನ್ಯಜೀವಿ-ಮಾನವ ಸಂಘರ್ಷ ಜೋರಾಗಿದೆ, ಮಳೆ ಹಾನಿ ಪರಿಹಾರ ನೀಡಿಲ್ಲ. ಹೀಗೆ ಅನೇಕ ಸಮಸ್ಯೆಗಳಿದ್ದರೂ ಸಿಎಂ ಕುರ್ಚಿಗಾಗಿ ಮ್ಯೂಸಿಕಲ್‌ ಚೇರ್‌ ಸ್ಪರ್ಧೆ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ ಸಿಗಲಿದೆ. ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿದ್ದು ವ್ಯರ್ಥವಾಗಲಿದೆ ಎಂದರು. ಇದನ್ನೂ ಓದಿ: ನಾಳೆ ಕರ್ನಾಟಕದಲ್ಲಿ ಕೈಗೆಟುಕುವ ದರದಲ್ಲಿ AI ಕಂಪ್ಯೂಟರ್ KEO ಲಾಂಚ್: ಪ್ರಿಯಾಂಕ್ ಖರ್ಗೆ

ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಬಗ್ಗೆ ಅರಣ್ಯ ಸಚಿವರು ಉತ್ತರ ನೀಡಬೇಕಿದೆ. ಇದು ಆಘಾತಕಾರಿ ಸಂಗತಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಬೆಳಗಾವಿ ಅಧಿವೇಶನದಲ್ಲಿ ಆರಂಭದಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಕಳೆದ ಬಾರಿ ಚರ್ಚೆಯಾದ ಸಮಸ್ಯೆಗಳನ್ನು ಪರಿಹರಿಸಲಾಗಿದೆಯೇ ಎಂದು ತಿಳಿಸಬೇಕು. ಕಬ್ಬು ಬೆಳೆಗಾರರ ಸಮಸ್ಯೆ, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಲಾಗುವುದು. ಕೇಂದ್ರ ಸಚಿವರಾದ ಹೆಚ್‌.ಡಿ.ಕುಮಾರಸ್ವಾಮಿ ಅವರ ಜೊತೆ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಚಾಮರಾಜನಗರದಲ್ಲಿ ರೈತರನ್ನು ಭೇಟಿ ಮಾಡಿದ್ದು, ಬೆಳೆ ಪರಿಹಾರ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಪರಿಹಾರ ನೀಡದೆಯೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಪುಟಗಟ್ಟಲೆ ಭಾಷಣ ಮಾಡುತ್ತಾರೆಯೇ ಹೊರತು ಪರಿಹಾರ ನೀಡುವುದಿಲ್ಲ. ಜಿಎಸ್‌ಟಿ ಸಮಿತಿಯ ಸಭೆಗೆ ಹೋಗದೆ, ಸಲಹೆ ನೀಡಬೇಕಾದ ಸಭೆಗೆ ಹೋಗದೆ ಈಗ ಇಲ್ಲಿ ಬಂದು ಆರೋಪ ಮಾಡುತ್ತಾರೆ. ಇರುವ ಅವಕಾಶಗಳನ್ನು ಬಳಸಿಕೊಳ್ಳದೆಯೇ ಈಗ ಮಾತಾಡಿ ಪ್ರಯೋಜನವಿಲ್ಲ. ಸಿಎಂ ಸಿದ್ದರಾಮಯ್ಯ ಮನವಿ ಕೊಟ್ಟು ಬಂದು ನಾಟಕವಾಡುತ್ತಿದ್ದಾರೆ. ಮನವಿ ಕೊಟ್ಟು ಹೊರಗೆ ಬಂದ ನಂತರ ವಂಚನೆಯಾಗಿದೆ ಎಂದು ಆರೋಪ ಮಾಡುತ್ತಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಕ್ಯಾಬಿನೆಟ್ ಪುನಾರಚನೆ ಬಿಸಿ ಬಲುಜೋರು – ಸಿಎಂ ನಿವಾಸಕ್ಕೆ ಶಾಸಕರ ದಂಡು!

Share This Article