ಚಾಮರಾಜನಗರ: ಕಾಂಗ್ರೆಸ್ ಪಕ್ಷ ವೋಟ್ ಚೋರಿ ಆರೋಪ ಮಾಡೋದು ಮಾಮೂಲಿ. ಇವಿಎಂ ಕೂಡ ಸರಿಯಿಲ್ಲ ಅಂತಾ ಹೇಳಿದರು. ಸೋತಾಗಲ್ಲೆಲ್ಲ ಇದೇ ಕಥೆ ಹೇಳ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಾಗ್ದಾಳಿ ನಡೆಸಿದರು.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕದಲ್ಲಿ 136 ಸೀಟ್ ಗೆದ್ದಾಗ ಯಾಕೆ ವೋಟ್ ಚೋರಿ ಆರೋಪ ಮಾಡಲಿಲ್ಲ. ತೆಲಂಗಾಣ ಚುನಾವಣೆಯಲ್ಲಿ ಗೆದ್ದಾಗ ಯಾಕೆ ಆರೋಪ ಮಾಡಲಿಲ್ಲ. ಅವರು ಗೆದ್ದಾಗ ಎಲ್ಲವೂ ಕೂಡ ಸರಿಯಿದೆ. ಸೋತಾಗ ಮಾತ್ರ ಹಸಿಮೆಣಸಿನಕಾಯಿ ಇಟ್ಟಂಗೆ ಆಗುತ್ತದೆ ಎಂದರು.
ರಾಹುಲ್ ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ. ಚುನಾವಣೆ ವೇಳೆ ಆರಾಮಾಗಿ ವಿದೇಶದಲ್ಲಿ ಸುತ್ತಾಡ್ತಾರೆ. ಆದರೆ, ಕಷ್ಟ ಬಿದ್ದು ಕೆಲಸ ಮಾಡಿದ್ದು ಮಾತ್ರ ಪ್ರಧಾನಿ. ಚುನಾವಣೆ ವೇಳೆ ಕಷ್ಟಪಟ್ಟಿದ್ದಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಮಾತನಾಡಿದರು.
ಅವರ ಎಂಟೈರ್ ಫ್ಯಾಮಿಲಿ ಮಜಾ ಹೊಡೆದುಕೊಂಡು ಇರುತ್ತಾರೆ. ಬೇಕಾದ ವೇಳೆ ಬರ್ತಾರೆ, ಬೇಡದೆ ಹೋದಾಗ ಹೋಗ್ತಾರೆ. ಅದಕ್ಕೆ ಜನರು ತಿರಸ್ಕರಿಸಿದ್ದಾರೆ. ಪ್ರಿಯಾಂಕಾ ವಾದ್ರಾ ಅಂತಾ ಹೇಳುವ ವೇಳೆ ವಾದ್ರಾನೋ ಅಥವಾ ವಡೆನೋ ಅಂತಾ ವ್ಯಂಗ್ಯವಾಡಿದರು.
ಸೋತಿದ್ದಕ್ಕೆ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ. ರಾಹುಲ್, ಲಾಲು ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೆ. ನಮ್ಮ ಸೋಲಿಗೆ ಕಾರಣವೇನು ಅನ್ನೋದನ್ನು ಮೊದಲು ವಿಮರ್ಶೆ ಮಾಡಿ ಅಂತಾ ಸಲಹೆ ನೀಡಿದರು.
