ದೇಶದಲ್ಲಿ ʻವೈಟ್‌ ಕಾಲರ್‌ʼ ರಕ್ಕಸರು – ಹೇಗೆ ಹುಟ್ಟಿಕೊಳ್ತಾರೆ? ಭಾರತಕ್ಕೆ ಏಕೆ ಸವಾಲು?

Public TV
6 Min Read

ಹಿಂದೆಲ್ಲ ಅನಕ್ಷರಸ್ಥರು, ನಿರುದ್ಯೋಗಿಗಳನ್ನ ತನ್ನತ್ತ ಸೆಳೆಯುತ್ತಿದ್ದ ಉಗ್ರರ ಗುಂಪುಗಳು (Terror Group) ಈಗ ವರಸೆ ಬದಲಿಸಿವೆ. ಉನ್ನತ ಶಿಕ್ಷಣ ಪಡೆದವರು, ಆರ್ಥಿಕವಾಗಿ ಪ್ರಬಲರಾಗಿರುವವರನ್ನೂ ತನ್ನ ಸೆಳೆದು ಆತ್ಮಾಹುತಿ ಬಾಂಬರ್‌ಗಳನ್ನಾಗಿ ಮಾಡುತ್ತಿವೆ. ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಕಾರು ಸ್ಫೋಟ ಭಾರತಕ್ಕೆ (India) ಭಯೋತ್ಪಾದನೆಯ ಈ ಹೊಸ ಮುಖವನ್ನ ಪರಿಚಯಿಸಿದೆ. ಏಕೆಂದ್ರೆ ಇಲ್ಲಿ ಸಂಭವಿಸಿದ ಕಾರು ಬಾಂಬ್‌ ಸ್ಫೋಟ ಕೇವಲ ಒಂದು ಸಾಮಾನ್ಯ ಭಯೋತ್ಪಾದಕ ಘಟನೆ ಅಂತ ನಾವು ತಿಳಿಯುವಂತಿಲ್ಲ. ಅದಕ್ಕಿಂತಲೂ ಹೆಚ್ಚಿನ ಭೀಕರತೆ ಹೊಂದಿದೆ. ಈ ದಾಳಿ ಮೂಲಕ ಭಾರತಕ್ಕೆ ಇದೇ ಮೊದಲ ಬಾರಿಗೆ `ವೈಟ್‌ ಕಾಲರ್‌ ಟೆರರಿಸಂ’ (White Collar Terror Module) ಎಂಬ ಹೊಸ ಮುಖದ ಪರಿಚಯವಾಗಿದೆ. ಸಮಾಜದಲ್ಲಿ ಉನ್ನತ ಮತ್ತು ಗೌರವಾನ್ವಿತ ಹುದ್ದೆಯಲ್ಲಿರುವ ವ್ಯಕ್ತಿಗಳು, ರಹಸ್ಯವಾಗಿ ರಾಕ್ಷಸರ ರೂಪ ತಳೆಯುತ್ತಿದ್ದು, ಮಗ್ಧ ಜನರ ರಕ್ತ ಕುಡಿಯಲು ಕಾತರದಿಂದ ಕಾಯುತ್ತಿದ್ದಾರೆ. ದೆಹಲಿ ಕಾರು ಬಾಂಬ್‌ ಸ್ಫೋಟ ಇವರ ಕರಾಳ ಮುಖವನ್ನ ಇಡೀ ಜಗತ್ತಿಗೆ ಪರಿಚಯಿಸಿದೆ.

ದೆಹಲಿ ಸ್ಫೋಟ (Delhi Explosion) ಪ್ರಕರಣದ ಕುರಿತು ಉನ್ನತ ತನಿಖಾ ಸಂಸ್ಥೆಗಳು ಒಂದಿಲ್ಲೊಂದು ರಹಸ್ಯಗಳನ್ನ ಬಯಲಿಗೆಳೆಯುತ್ತಿವೆ. ಈ ನಡುವೆ ʻವೈಟ್‌ ಕಾಲರ್‌‌ ಭಯೋತ್ಪಾದನೆʼ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಷ್ಟಕ್ಕೂ ಈ ವೈಟ್‌ ಕಾಲರ್‌ ಭಯೋತ್ಪಾದನೆ ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಭಾರತದಲ್ಲಿ ಇದು ಹೊಸದೇ? ಎನ್ನುವ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ವೈಟ್‌ ಕಾಲರ್‌ ಭಯೋತ್ಪಾದನೆ ಅಂದ್ರೆ ಏನು?

ಇದು ʻವೈಟ್‌ ಕಾಲರ್‌ ಅಪರಾಧʼ ಎನ್ನುವ ಪರಿಕಲ್ಪನೆಯಿಂದ ಪ್ರೇರಿತವಾದುದು. ವೃತ್ತಿಪರ ಶಿಕ್ಷಣ ಅಥವಾ ಉನ್ನತ ಶಿಕ್ಷಣ ಪಡೆದಿರುವವರು, ಭಯೋತ್ಪಾದನೆಯಲ್ಲಿ ತೊಡಗಿದ್ರೆ ಅದನ್ನು ವೈಟ್‌ ಕಾಲರ್‌ ಭಯೋತ್ಪಾದನೆ ಎನ್ನಲಾಗುತ್ತದೆ. ಧಾರ್ಮಿಕ ಮೂಲಭೂತವಾದಿಗಳಿಂದ ಬ್ರೈನ್‌ವಾಶ್‌ಗೆ ಒಳಗಾದವರು, ಅನಕ್ಷರಸ್ಥರು, ಉಗ್ರರಾಗಿ ಬದಲಾಗುತ್ತಾರೆ ಎಂಬುದು ಸಹಜ. ಆದ್ರೆ ಈಗ ಅದರಲ್ಲೂ ಟ್ರೆಂಡ್‌ ಬದಲಾಗಿದೆ. ಉತ್ತಮ ಶಿಕ್ಷಣ ಪಡೆದು ಉನ್ನತ ಉದ್ಯೋಗದಲ್ಲಿರುವವರೂ ಉಗ್ರರಾಗುತ್ತಿದ್ದಾರೆ. ಇದಕ್ಕೆ ದೆಹಲಿ ಸ್ಫೋಟ ಪ್ರಕರಣದ ರುವಾರಿ ಡಾ. ಉಮರ್‌ ಮೊಹಮ್ಮದ್‌ ದೊಡ್ಡ ನಿದರ್ಶನವಾಗಿದ್ದಾನೆ.

2008ರಂದು ನಡೆದಿದ್ದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಏಕೈಕ ಉಗ್ರ ಅಜ್ಮಲ್‌ ಕಸಬ್‌. ಪಾಕಿಸ್ತಾನದ ಉಗ್ರ ಸಂಘಟನೆಗಳು ಹೇಗೆ ಯುವಕರನ್ನ ಸೆಳೆಯುತ್ತವೆ ಅನ್ನೋದು ಕಸಬ್‌ನಿಂದ ಸ್ಪಷ್ಟವಾಗಿತ್ತು. ಇದಕ್ಕೂ ಮುನ್ನ 2003ರಲ್ಲಿ ಅರ್ಜುನ್‌ ಸರ್ಜಾ ಅಭಿನಯದ ತಮಿಳು ಸಿನಿಮಾ ʻಪರಶುರಾಮ್‌ʼ ಚಿತ್ರದಲ್ಲಿ ವಿದ್ಯಾವಂತರನ್ನ ಹೇಗೆ ಬ್ರೈನ್‌ ವಾಶ್‌ ಮಾಡಲಾಗುತ್ತದೆ ಎಂಬುದನ್ನ ತೋರಿಸಿತ್ತು.

ʻಹಬ್ಬದ ದಿನ ಅಪ್ಪ ಹೊಸ ಬಟ್ಟೆ ಕೊಡಿಸಲಿಲ್ಲ ಅಂತ ಮನೆ ಬಿಟ್ಟಿದ್ದ ಕಸಬ್‌ ಸಣ್ಣಪುಟ್ಟ ಅಪರಾಧ ಕೃತ್ಯ ಮಾಡುತ್ತಾ ಹಣ ಸಂಪಾದಿಸುತ್ತಿದ್ದ. ಬಳಿಕ ಲಷ್ಕರ್‌ ಅವನಿಗೆ ದೊಡ್ಡದಾಗಿ ಹಣದ ಆಮಿಷ ತೋರಿಸಿ ತನ್ನತ್ತ ಸೆಳೆಯಿತು. ತರಬೇತಿ ಉಗ್ರನನ್ನಾಗಿ ಮಾಡಿದದ್ದಲ್ಲದೇ ಅವನ ಕುಟುಂಬಕ್ಕೆ 1.5 ಲಕ್ಷ ಹಣ ಕೊಡುವುದಾಗಿಯೂ ಲಷ್ಕರ್‌ ಕಮಾಂಡರ್‌ ಹೇಳಿದ್ದನಂತೆ. ಈ ಆಮಿಷ ತೋರಿಸಿಯೇ ಮುಂಬೈ ದಾಳಿಗೆ ಮನವೊಲಿಸಲಾಗಿತ್ತು. ಜಾಗತಿಕ ಉಗ್ರ ಸಂಘಟನೆಗಳು ಬಹುತೇಕ ಇದೇ ಮಾದರಿಯನ್ನ ಅನುಸರಿಸುತ್ತಿದ್ದವು. ಯುನಿಸೆಫ್‌ನ ವರದಿಯ ಪ್ರಕಾರ 2005ರಿಂದ 1011ರ ವರೆಗೆ 1.05 ಲಕ್ಷ ಮಕ್ಕಳು ಉಗ್ರ ಸಂಘಟನೆಗಳಿಗೆ ಸೇರಿದ್ದಾರೆ. ವಾಸ್ತವ ಸಂಖ್ಯೆ ಅದಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯಿದೆ ಎಂದೂ ವರದಿ ಹೇಳಿದೆ. ಇವು ಭಯೋತ್ಪಾದನಾ ಜಾಲ ರೂಪಿಸುವ ಪಾರಂಪರಿಕ ವರದಿ ಆದ್ರೆ, ದೆಹಲಿ ಸ್ಫೋಟದ ಬಳಿಕ ʻವೈಟ್‌ ಕಾಲರ್‌ʼ ಎನ್ನುವ ಹೊಸ ಮುಖದ ಪರಿಚಯವಾಗಿದೆ.

ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್‌ ಫಲಾಹ್‌ ವೈದ್ಯಕೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಪುಲ್ವಾಮಾದ ಡಾ.ಉಮರ್‌ ನಬಿ, ಅದೇ ವಿಶ್ವವಿದ್ಯಾಲಯದ ಡಾ.ಮುಜಮಿಲ್‌ ಗನಿ, ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ವೈದ್ಯೆ ಆಗಿದ್ದ ಡಾ. ಶಾಹೀನ್‌ ಸಯೀದ್‌, ವೈದ್ಯ ಡಾ. ಪರ್ವೇಜ್‌ ಅನ್ಸಾರಿ, ಅನಂತನಾಗ್‌ನ ಡಾ. ಆದಿಲ್‌ ಅಹ್ಮದ್‌ ಅವರು ಜೈಶ್‌ ಹಾಗೂ ಅನ್ಸಾರ್‌ ಗಜ್ಜತ್‌ ಉಲ್‌ ಹಿಂದ್‌ ಉಗ್ರ ಸಂಘಟನೆಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.

ಅಲ್ಲದೇ ಆತ್ಮಾಹುತಿ ಬಾಂಬರ್‌ ಡಾ. ಉಮರ್‌ ನಭಿ, ಬಾಂಬ್‌ ಎಕ್ಸ್‌ಪರ್ಟ್‌ ಕೂಡ ಆಗಿದ್ದ, ದಿನಬಳಕೆ ವಸ್ತುಗಳನ್ನೇ ಬಳಕೆ ಮಾಡಿಕೊಂಡು ಹೆಚ್ಚಿನ ತೀವ್ರತೆಯುಳ್ಳ ಬಾಂಬ್‌ ತಯಾರಿಸೋದ್ರಲ್ಲಿ ಎತ್ತಿದ ಕೈ ಆಗಿದ್ದ. ದೆಹಲಿ ಸ್ಫೋಟಗೊಂಡ ಕಾರಿನಲ್ಲಿ ಮನೆಯಲ್ಲಿ ಬಳಸುವಂತೆ ಆನ್‌-ಆಫ್‌ ಸ್ವಿಚ್‌ ಮೂಲಕ ಆಪರೇಟ್‌ ಮಾಡಲು ಬಾಂಬ್‌ ಸೆಟಪ್‌ ಮಾಡಿದ್ದ. ಅದಕ್ಕಾಗಿ ಮೂರು ಗಂಟೆಗಳಿಂದ ಪಾರ್ಕಿಂಗ್‌ ಮಾಡಿದ್ದ ಕಾರಿನೊಳಗೇ ಇದ್ದ ಎಂಬುದನ್ನ ತನಿಖಾ ಸಂಸ್ಥೆಗಳು ಬಯಲಿಗೆಳೆದಿವೆ. ಅಲ್ಲದೇ ಸ್ಫೋಟಗೊಂಡ ಸ್ಥಳದಲ್ಲಿ ಸೇನಾ ಬಾಂಬ್‌ಗಿಂತಲೂ ಹೆಚ್ಚು ತೀವ್ರತೆಹೊಂದಿರುವ ಕೆಮಿಕಲ್‌ ಪತ್ತೆಯಾಗಿದೆ ಅಂತಲೂ ತನಿಖಾ ಮೂಲಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಉಗ್ರ ಸಂಘಟನೆಗಳಿಗೆ ವೈದ್ಯರ ನೇಮಕಾತಿ ಅಗತ್ಯವೇ?

ಕೆಲ ವರ್ಷಗಳವರೆಗೂ ಭಯೋತ್ಪಾದನಾ ಚಟುವಟಿಕೆಗಲ್ಲಿ ಎಂಜಿನಿಯರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ವರದಿಯಾಗುತ್ತಿತ್ತು. ಇತ್ತೀಚೆಗೆ ವೈದ್ಯರು ಕೂಡ ಈ ಜಾಲದ ಭಾಗವಾಗಿರುವುದು ಕಂಡುಬರುತ್ತಿದೆ. ವೈದ್ಯರು ಹೆಚ್ಚು ಜ್ಞಾನ, ಕೌಶಲ ಹೊಂದಿರುತ್ತಾರೆ, ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸಾಮಾಜಿಕವಾಗಿ ಹೆಚ್ಚು ಜನರೊಂದಿಗೆ ತೊಡಗಿಕೊಂಡಿರುತ್ತಾರೆ. ಸಮಾಜದಲ್ಲಿ ಗೌರವವನ್ನೂ ಹೊಂದಿರುತ್ತಾರೆ ಅವರು ನಡೆಸುವ ಚಟುವಟಿಕೆಗಳ ಬಗ್ಗೆ ಜನರಿಗೆ ಯಾವುದೇ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಭಯೋತ್ಪಾದನಾ ಜಾಲಗಳು ವೈದ್ಯರನ್ನ ತಮ್ಮತ್ತ ಸೆಳೆಯಲು ಯತ್ನಿಸುತ್ತಿವೆ ಎಂಬುದು ತಜ್ಞರ ವಾದ.

ಉಗ್ರರಾಗಿ ಬದಲಾಗುವುದು ಏಕೆ?

ಉನ್ನತ ಶಿಕ್ಷಣ ಪಡೆದವರು, ಆರ್ಥಿಕವಾಗಿ ಸದೃಢರಾದರು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದವರೂ ಭಯೋತ್ಪಾದನಾ ಸಂಟನೆಗಳಿಗೆ ಸೇರುವುದಕ್ಕೆ ಹಲವು ಕಾರಣಗಳಿವೆ.

ತಮ್ಮನ್ನು ಶೋಷಿಸಲಾಗುತ್ತಿದೆ, ಸಮಾಜದಲ್ಲಿ ಗೌರವ ಸಿಗುತ್ತಿಲ್ಲ. ಸಮುದಾಯದ ಉಳಿವಿಗೆ ಬೆದರಿಕೆ ಒಡ್ಡಲಾಗುತ್ತಿದೆ ಮುಂತಾದ ಭಾವನಾತ್ಮಕ ಕಾರಣಗಳಿವೆ. ಇದೀಷ್ಟೇ ಅಲ್ಲದೇ ಮೂಲಭೂತವಾದದ ಸೆಳೆತ, ಸಂಘಟನೆ ಆಧಾರಿತವಾಗಿ ಗುರುತಿಸಿಕೊಳ್ಳುವ ಬಯಕೆ, ಸಂಘಟನೆಗಳ ಸಿದ್ಧಾಂತ, ನಿಲುವುಗಳ ಆಕರ್ಷಣೆ, ಆರ್ಥಿಕ ಸಂಕಷ್ಟ, ಇನ್ನಷ್ಟು ಹಣ ಸಂಪಾದಿಸುವ ಉದ್ದೇಶ, ಜನಪ್ರಿಯತೆ ಗಳಿಸುವ ಆಸೆಯಿಂದ ವಿದ್ಯಾವಂತರು, ಆರ್ಥಿಕವಾಗಿ ಸಬಲರಾಗಿರುವವರು ಇಂತಹ ಕೆಲಸಗಗೆ ಇಳಿಯುತ್ತಿದ್ದಾರೆ.

ʻವೈಟ್‌ ಕಾಲರ್‌ ಭಯೋತ್ಪಾದನೆʼ ಭಾರತದಲ್ಲಿ ಹೊಸದೇ?

  • ಈ ಪರಿಕಲ್ಪನೆ ಭಾರತದಲ್ಲಿ ಹೊಸದೇನಲ್ಲ. ಉನ್ನತ ಶಿಕ್ಷಣ ಪಡೆದವರು, ಆರ್ಥಿಕವಾಗಿ ಸದೃಢ ಕುಟುಂಬಗಳಿಗೆ ಸೇರಿದವರು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಉದಾಹರಣೆಗೆ….
  • ಭಾರತದಲ್ಲಿ ಜೈಲಿನಲ್ಲಿರುವ 26/11 ಮುಂಬೈ ದಾಳಿಯ ಸಂಚುಕೋರ ಡೇವಿಡ್‌ ಕೋಲ್ಮನ್ ಹೆಡ್ಲಿ, ಪಾಕಿಸ್ತಾನದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ. ಅಮೆರಿಕದಲ್ಲಿ ಉದ್ಯಮಿಯಾಗಿದ್ದುಕೊಂಡು ಆರ್ಥಿಕವಾಗಿಯೂ ಪ್ರಬಲನಾಗಿದ್ದ.
  • ಜಮ್ಮು ಮತ್ತು ಕಾಶ್ಮೀರದ ಶಾಲೆಗಳಲ್ಲಿ ಉಗ್ರ ಸಂಘಟನೆಗಳು ಶಾಲೆಯಿಂದ ಹೊರಗುಳಿದ, ಬಡ ಕುಟುಂಬಗಳ ಮಕ್ಕಳು, ಯುವಕರನ್ನು ಸಂಘಟನೆಗಳಿಗೆ ಸೇರಿಕೊಂಡು ಅವರ ತಲೆಯಲ್ಲಿ ಮೂಲಭೂತವಾದ ತುಂಬಿ ಭಯೋತ್ಪಾದನಾ ತರಬೇತಿ ನೀಡಿದ್ರೆ, ಮೂಲಭೂತವಾದದ ಅಮಲೇರಿಸಿಕೊಂಡ ವಿದ್ಯಾವಂತ ಯುವಜನರು ನಗರ, ಪಟ್ಟಣ ಪ್ರದೇಶಗಳಲ್ಲಿ ನೆಲೆಸಿ, ಸಾಮಾಜಿಕ ಜಾಲತಾಣಗಳ ಮೂಲಕ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಪೊಲೀಸರು, ಭದ್ರತಾ ಪಡೆಗಳು ವರ್ಷಗಳ ಹಿಂದೆಯೇ ಗಮನ ಸೆಳೆದಿದ್ದವು. ತನಿಖಾ ಸಂಸ್ಥೆಗಳು ಇವರನ್ನು ʻಸೈಬರ್‌ ಉಗ್ರರುʼ ಎಂದು ಕರೆದಿತ್ತು.
  • ನಿಷೇಧಿತ ಇಂಡಿಯನ್‌ ಮುಜಾಹಿದಿನ್‌ ಸಂಘಟನೆಯ ಅಬ್ದುಲ್‌ ಶುಭನ್‌ ಖುರೇಷಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ.
  • ಹೊರದೇಶಗಳಲ್ಲೂ ನೋಡುವುದಾದ್ರೆ 2011ರಲ್ಲಿ ಅಮೆರಿಕದ ಡಬ್ಲ್ಯೂಟಿಸಿ ಟ್ವಿನ್‌ ಟವರ್ ಮೇಲೆ ದಾಳಿ ನಡೆಸಿದ ವಿಮಾನ ಅಪಹರಣಕಾರರ ನಾಯಕತ್ವ ವಹಿಸಿದ್ದ ಮೊಹಮ್ಮದ್‌ ಅಟ್ಟಾ ನಗರ ಯೋಜನೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ.
  • ಶ್ರೀಲಂಕಾದಲ್ಲಿ ಸಕ್ರಿಯವಾಗಿದ್ದ ಎಲ್‌ಟಿಟಿಇ ಬಂಡುಕೋರರ ಸಂಘಟನೆಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನ ಸಂಶೋಧಕರನ್ನ ನೇಮಕಾತಿ ಮಾಡಿಕೊಳ್ಳುತ್ತಿತ್ತು. ಆ ಸಂಘಟನೆಯ ಅಂತಾರಾಷ್ಟ್ರೀಯ ಜಾಲದಲ್ಲಿ ಉನ್ನತ ಹುದ್ದೆಗಳಲ್ಲಿ ಉನ್ನತ ಶಿಕ್ಷಣ ಪಡೆದವರೂ ಇದ್ದರು.

ಒಟ್ಟಾರೆ ದೆಹಲಿಯಲ್ಲಿ ಭಯೋತ್ಪಾದಕರ ದಾಳಿ ನಡೆದು ಹಲವು ವರ್ಷಗಳೇ ಗತಿಸಿದ್ದವು. ಜಮ್ಮು-ಕಾಶ್ಮೀರ ಹೊರತುಪಡಿಸಿದ್ರೆ ದೇಶದ ಬೇರೆ ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವ ದಾಳಿಯೂ ನಡೆದಿರಲಿಲ್ಲ. ಭಯೋತ್ಪಾದನೆಯಿಂದ ದೇಶವನ್ನ ಮುಕ್ತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪದೇ ಪದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ಇತ್ತು. ದೆಹಲಿಯಲ್ಲಿ ನಡೆದಿರುವ ಕೃತ್ಯವು ಆಘಾತವನ್ನುಂಟುಮಾಡಿದೆ ಮತ್ತು ಭಯೋತ್ಪಾದನೆಯ ಅಪಾಯ ಇನ್ನೂ ಇದೆ ಎಂಬುದನ್ನು ಮನದಟ್ಟುಮಾಡಿದೆ.

ಪ್ರತಿಯೊಂದು ಭಯೋತ್ಪಾದನಾ ದಾಳಿಯೂ ಆಂತರಿಕ ಭದ್ರತೆ ಮತ್ತು ಗುಪ್ತಚರ ವೈಫಲ್ಯದ ಕುರಿತು ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತದೆ. ಅದರಲ್ಲೂ ಅತ್ಯಂತ ಹೆಚ್ಚಿನ ಭದ್ರತೆ ಇರುವ ಪ್ರದೇಶದಲ್ಲಿಯೇ ಈಗಿನ ಕೃತ್ಯ ನಡೆದಿದೆ. ಇದೊಂದು ಹೃದಯಹೀನ ಭಯೋತ್ಪಾದಕರ ಕೃತ್ಯ’ ಎಂದು ಹೇಳಿ ಸರ್ಕಾರ ಹಾಗೂ ಭದ್ರತಾ ಏಜೆನ್ಸಿಗಳು ತಮ್ಮ ಹೊಣೆಯಿಂದ ನುಣುಚಿಕೊಳ್ಳುವಂತಿಲ್ಲ. ಏಕೆಂದರೆ, ಈ ದುಷ್ಕೃತ್ಯದಿಂದ ಅಮೂಲ್ಯ ಜೀವಗಳು ಬಲಿಯಾಗಿವೆ ಮತ್ತು ಜನರಲ್ಲಿದ್ದ ಸುರಕ್ಷತೆಯ ಭಾವಕ್ಕೂ ಗಾಸಿಯಾಗಿದೆ. ದೇಶದ ಜನರು ನೆಮ್ಮದಿಯಿಂದ ಮತ್ತು ಸುರಕ್ಷತೆಯ ಭಾವದಿಂದ ಬದುಕು ಸಾಗಿಸುವ ಹಕ್ಕನ್ನು ಹೊಂದಿದ್ದಾರೆ ಮತ್ತು ಅವರ ಈ ಹಕ್ಕನ್ನು ಸಂರಕ್ಷಿಸುವುದು ಎಲ್ಲ ಸರ್ಕಾರಗಳ ಹೊಣೆಯಾಗಿದೆ.

Share This Article