ಕೊಳಕು ಕಿಡ್ನಿ ನೀಡಿದ್ದೇನೆ ಎಂದಿದ್ದಾರೆ, ಹೆಣ್ಣು ಮಕ್ಕಳು ತಂದೆಗೆ ಸಹಾಯ ಮಾಡಬೇಡಿ: ನಿಂದಿಸಿದ್ದಕ್ಕೆ ತೇಜಸ್ವಿ ವಿರುದ್ಧ ಲಾಲು ಪುತ್ರಿ ಆಕ್ರೋಶ

Public TV
3 Min Read

ನವದೆಹಲಿ: ಆರ್‌ಜೆಡಿ (RJD) ನಾಯಕ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ಕುಟುಂಬದ ಆಂತರಿಕ ಕಲಹ ಈಗ ಮತ್ತಷ್ಟು ಸ್ಫೋಟಗೊಂಡಿದೆ. ತಂದೆಗೆ ನನ್ನ ಕಿಡ್ನಿ ನೀಡಿದ್ದಕ್ಕೆ ಕೊಳಕು ಕಿಡ್ನಿ ನೀಡಿದ್ದೇನೆ ಎಂದು ನನ್ನನ್ನು ನಿಂದಿಸಿದ್ದಾರೆ ಎಂಬುದಾಗಿ ಪುತ್ರಿ ರೋಹಿಣಿ ಆಚಾರ್ಯ (Rohini Acharya) ಎಕ್ಸ್‌ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇಂದು ಬೆಳಿಗ್ಗೆ ತನ್ನ ಮೇಲೆ ಚಪ್ಪಲಿ ಎತ್ತಿದ್ದಾರೆ.ಚುನಾವಣಾ ಟಿಕೆಟ್‌ ಪಡೆಯಲು ತಂದೆಗೆ ತನ್ನ ಕೊಳಕು ಮೂತ್ರಪಿಂಡ ವನ್ನು ದಾನ ಮಾಡಿರುವುದಾಗಿ ನಿಂದಿಸಿದ್ದಾರೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ಮದುವೆಯಾದ ಎಲ್ಲಾ ಹೆಣ್ಣು ಮಕ್ಕಳಿಗೆ ನಾನು ಹೇಳಬಯಸುತ್ತೇನೆ. ನಿಮ್ಮ ತವರು ಮನೆಯಲ್ಲಿ ಸಹೋದರನಿದ್ದರೆ, ನಿಮ್ಮ ದೇವರಂತ ತಂದೆಯನ್ನು ತಪ್ಪಾಗಿಯೂ ಉಳಿಸಬೇಡಿ. ನಿಮ್ಮ ಅಣ್ಣ ಅಥವಾ ತಮ್ಮನಿಗೆ ಅಥವಾ ಹರಿಯಾಣದ ಸ್ನೇಹಿತನಿಗೆ ಕಿಡ್ನಿ ಕಸಿ ಮಾಡಿಸಲು ಹೇಳಿ. ಎಲ್ಲಾ ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಮ್ಮ ಮನೆ ಮತ್ತು ಕುಟುಂಬ, ಮಕ್ಕಳು, ಅತ್ತೆ-ಮಾವಂದಿರನ್ನು ನೋಡಿಕೊಳ್ಳಿ.

ಹೆತ್ತವರನ್ನು ನೋಡಿಕೊಳ್ಳದೇ ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸಿ. ನಾನು ನನ್ನ ಕುಟುಂಬವನ್ನು, ನನ್ನ ಮೂವರು ಮಕ್ಕಳನ್ನು ನೋಡಿಕೊಳ್ಳದೇ ದೊಡ್ಡ ಅಪರಾಧ ಮಾಡಿದ್ದೇನೆ. ನನ್ನ ಮೂತ್ರಪಿಂಡವನ್ನು ದಾನ ಮಾಡುವಾಗ ನಾನು ನನ್ನ ಗಂಡ ಅಥವಾ ನನ್ನ ಅತ್ತೆ-ಮಾವನ ಅನುಮತಿಯನ್ನು ಪಡೆದಿರಲಿಲ್ಲ. ನನ್ನ ತಂದೆಯನ್ನು ಉಳಿಸಲು ಇಂದು ಕೊಳಕು ಎಂದು ಕರೆಯಲ್ಪಡುವ ಕೆಲಸ ಮಾಡಿದ್ದಕ್ಕೆ ನನಗೆ ಬೇಸರವಿದೆ. ನೀವೆಲ್ಲರೂ ನಾನು ಮಾಡಿದ ತಪ್ಪು ಮಾಡಬಾರದು. ರೋಹಿಣಿಯಂತಹ ಮಗಳು ಯಾರಿಗೂ ಸಿಗದಿರಲಿ ಎಂದು ಬರೆದಿದ್ದಾರೆ. ಇದನ್ನೂ ಓದಿ:  ನಿತೀಶ್‌ ಸರ್ಕಾರ ವಿಶ್ವಬ್ಯಾಂಕ್‌ನ 14,000 ಕೋಟಿ ಸಾಲದ ಹಣ ಸೇರಿ 40,000 ಕೋಟಿ ಖರ್ಚು ಮಾಡಿದೆ: ಜನ್‌ ಸುರಾಜ್‌


ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷ ಹೀನಾಯವಾಗಿ ಸೋತ ಬಳಿಕ ಲಾಲು ಪ್ರಸಾದ್‌ ಕುಟುಂಬದ ಯಾದವಿ ಕುಟುಂಬ ಒಳಜಗಳ ಈಗ ಬೀದಿಗೆ ಬಂದಿದೆ. ಆರ್​ಜೆಡಿ ಪಕ್ಷದ ಸೋಲಿಗೆ ರೋಹಿಣಿ ಆಚಾರ್ಯ ಅವರನ್ನು ದೂಷಿಸಲಾಗಿದೆ. ಮುಖ್ಯವಾಗಿ ತೇಜಸ್ವಿ ಯಾದವ್ (Tejashwi Yadav) ಆರ್‌ಜೆಡಿ ಸಿಎಂ ಅಭ್ಯರ್ಥಿಯಾಗಿದ್ದರೂ ಪಕ್ಷ ಸಂಜಯ್ ಯಾದವ್ ಮತ್ತು ರಮೀಜ್ ಅವರ ಕೈಯಲ್ಲಿದೆ. ಅವರು ಹೇಳಿದಂತೆ ತೇಜಸ್ವಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ರೋಹಿಣಿ ಆಚಾರ್ಯ ಅವರ ಆರೋಪ. ಈ ಕಾರಣಕ್ಕೆ ಈಗ ಪಕ್ಷಕ್ಕೆ ಲಾಲು ಪುತ್ರಿ ಗುಡ್‌ಬೈ ಹೇಳಿದ್ದಾರೆ.

ಮೊದಲ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಕುಟುಂಬ ಮತ್ತು ಆರ್‌ಜೆಡಿ ಪಕ್ಷದಿಂದ ಲಾಲು ಉಚ್ಚಾಟನೆ ಮಾಡಿದ್ದರು. ಉಚ್ಚಾಟನೆಯ ಬಳಿಕ ತಮ್ಮದೇ ಜನಶಕ್ತಿ ಜನತಾ ದಳ (ಜೆಜೆಡಿ) ಪಕ್ಷ ಸ್ಥಾಪಿಸಿದ್ದ ತೇಜ್‌ ಪ್ರತಾಪ್‌ ಯಾದವ್‌, ಮಹುವಾದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಈಗ ಲಾಲು ಅವರ ಪುತ್ರಿ ಕುಟುಂಬದ ಜೊತೆ ಸಂಪರ್ಕವನ್ನು ಕಡಿದುಕೊಂಡಿದ್ದಾರೆ.

Share This Article