IND vs SA | 2ನೇ ದಿನಾಂತ್ಯಕ್ಕೆ ದ.ಆಫ್ರಿಕಾ 93/7 – 63 ರನ್‌ಗಳ ಅಲ್ಪ ಮುನ್ನಡೆ

Public TV
2 Min Read

ಕೋಲ್ಕತ್ತಾ: ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ದಕ್ಷಿಣ ಆಫ್ರಿಕಾ ಎರಡನೇ ದಿನದ ಅಂತ್ಯಕ್ಕೆ ತನ್ನ 2ನೇ ಇನಿಂಗ್ಸ್‌ನಲ್ಲಿ 93 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 159 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 37/1 ರನ್ ಗಳಿಸಿತ್ತು. ಎರಡನೇ ದಿನ ಆಟ ಆರಂಭಿಸಿದ ಭಾರತದ ಇನ್ನಿಂಗ್ಸ್ 189ಕ್ಕೆ ಅಂತ್ಯಗೊಂಡು, 30 ರನ್‌ಗಳ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಹೋರಾಟ ನಡೆಸಿದ ದಕ್ಷಿಣ ಆಫ್ರಿಕಾ 2ನೇ ದಿನದಾಟದ ಅಂತ್ಯಕ್ಕೆ 93 ರನ್ ಗಳಿಗೆ 7 ವಿಕೆಟ್‌ ಕಳೆದುಕೊಂಡು 63 ರನ್‌ ಮುನ್ನಡೆ ಸಾಧಿಸಿದೆ.

30 ರನ್‌ಗಳ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡ, ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿ ಹೋಗಿದೆ. ರಿಯಾನ್ ರಿಕಲ್ಟನ್ (11), ಏಡಮ್ ಮಾರ್ಕರಂ (11) ಹಾಗೂ ಮಾರ್ಕೋ ಜಾನ್ಸನ್ (13) ಎರಡಂಕಿ ಗಡಿ ದಾಟಿದರು. ಅಜೇಯ 29 ರನ್ ಗಳಿಸಿರುವ ನಾಯಕ ತೆಂಬಾ ಬವುಮಾ ಹಾಗೂ 1 ರನ್ ಗಳಿಸಿರುವ ಕಾರ್ಬಿನ್ ಬಾಷ್ ಸಧ್ಯ ಕ್ರೀಸ್‌ನಲ್ಲಿದ್ದಾರೆ.

ಭಾರತದ ಪರ ಎರಡನೇ ಇನಿಂಗ್ಸ್‌ ಬೌಲಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜಾ (13-3-29-4) ಯಶಸ್ವಿ ಬೌಲರ್ ಎನಿಸಿಕೊಂಡರು. ಕುಲದೀಪ್ ಯಾದವ್ (2) ಹಾಗೂ ಅಕ್ಷರ್ ಪಟೇಲ್ (1) ವಿಕೆಟ್ ಪಡೆದು ಮಿಂಚಿದರು.

ದಕ್ಷಿಣ ಆಫ್ರಿಕಾ ಪರ ಸೈಮನ್ ಹಾರ್ಮರ್ (15.2-4-30-4) ಭಾರತದ ಕುಸಿತಕ್ಕೆ ಕಾರಣವಾದರು. ವೇಗಿ ಮಾರ್ಕೋ ಜಾನ್ಸನ್ (15-4-35-30) ಶಿಸ್ತಿನ ಬೌಲಿಂಗ್ ದಾಳಿಯಿಂದ ಭಾರತ ತಂಡ 62.2 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಕೆ.ಎಲ್. ರಾಹುಲ್ (39 ರನ್) ಗಳಿಸಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ವಾಷಿಂಗ್ಟನ್‌ ಸುಂದರ್ (29), ರಿಷಬ್ ಪಂತ್ (27) ರನ್ ಹಾಗೂ ಆಲ್‌ರೌಂಡ‌ರ್ ರವೀಂದ್ರ ಜಡೇಜಾ (27) ರನ್ ಗಳಿಸಿ ಔಟ್ ಆದರು.

Share This Article