ಹರಿಯಾಣ ಮೂಲದ ಮಹಿಳೆಯ ಶವ ಕೊಡಗಿನ ಗಡಿಭಾಗದಲ್ಲಿ ಪತ್ತೆ!

Public TV
2 Min Read

– ಕಾರಿನಲ್ಲಿಟ್ಟು ಶವ ಸಾಗಾಟ; ಪತಿ ಸೇರಿ ಮೂವರು ವಶಕ್ಕೆ

ಮಡಿಕೇರಿ: ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರನ್ನ ತಡೆದು ತಪಾಸಣೆ ನಡೆಸಿದಾಗ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಲಿಂಗಪುರ ಅರಣ್ಯ ಪ್ರದೇಶದ ಚೆಕ್‌ ಪೋಸ್ಟ್ (Kodagu Checkpost) ಬಳಿ ನಡೆದಿದೆ. ಬಳಿಕ ಕಾರಿನಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೌದು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಲಿಂಗಪುರ ಎಂಬ ಅರಣ್ಯ ಪ್ರದೇಶ (Forest Area) ಚೆಕ್ ಪೋಸ್ಟ್‌ ಬಳಿ ಶುಕ್ರವಾರ ತಡರಾತ್ರಿ 2 ಗಂಟೆ ಆಸುಪಾಸಿನಲ್ಲಿ ಆಲ್ಟೋ-800 ಕಾರೊಂದು ಅನುಮಾನಾಸ್ಪದವಾಗಿ ಓಡಾಟ ನಡೆಸಿತ್ತು. ಚೆಕ್‌ಪೋಸ್ಟ್‌ ಬಳಿ ಸಿಬ್ಬಂದಿಯನ್ನ ನೋಡುತ್ತಿದ್ದಂತೆ ಕಾರನ್ನು ಬೇರೆಡೆಗೆ ತಿರುಗಿಸಿದ್ದರು. ಇದರಿಂದ ಸಂಶಯಗೊಂಡ ಚೆಕ್‌ ಪೋಸ್ಟ್‌ ಸಿಬ್ಬಂದಿ ಕಾರನ್ನು ತಡೆದು ಪರಿಶೀಲಿಸಿದ್ದಾರೆ. ಆ ಬಳಿಕ ಕಾರಿನಲ್ಲಿ ಮಹಿಳೆಯ ಶವ ಇರೋದು ಗೊತ್ತಾಗಿದೆ. ತಕ್ಷಣವೇ ಸಿಬ್ಬಂದಿ ಕೊಡಗಿನ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳ್ಕಕೆ ಬಂದ ಪೊಲೀಸರು (Madikeri Police) ಕಾರು ಸಮೇತ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ..?
ಮೂಲತಃ ಹರಿಯಾಣ ನಿವಾಸಿಗಳಾದ ರಾಕೇಶ್ ಕುಮಾರ್ ಮತ್ತು ಆತನ ಪತ್ನಿ ನಾನ್ಕಿದೇವಿ (44) ಇಬ್ಬರೂ, ಉಳಿದ ಇಬ್ಬರು ಸ್ನೇಹಿತರೊಂದಿಗೆ ಮೈಸೂರಿನ ಮೇಟಗಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದರು. ನಾನ್ಕಿ ದೇವಿಯು ಶುಕ್ರವಾರ ರಾತ್ರಿ ಯಾರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಂತೆ. ರಾತ್ರಿ ಕೆಲಸ ಮುಗಿಸಿ ಬಂದು ನೋಡಿದಾಗ ಪತಿ ರಾಕೇಶ್ ಕುಮಾರ್‌ಗೆ ಗೊತ್ತಾಗಿದೆ. ಗಾಬರಿಗೊಂಡ ಗಂಡ ಮತ್ತು ಆತನ ಸ್ನೇಹಿತರಾದ ವಿಕಾಸ್ (32) ಸತ್ ವೀರ್ (32), ಮಹಿಳೆಯ ಮೃತದೇಹವನ್ನ ಕೊಡಗಿಗೆ ತಂದಿದ್ದಾರೆ.

ಕೊಡಗಿನ ಮಾಲ್ದಾರೆ ಸಮೀಪದ ಲಿಂಗಪುರ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬರುತ್ತಿರುವ ವೇಳೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅರಣ್ಯ ಸಿಬ್ಬಂದಿ ಕಾರನ್ನು ತಪಾಸಣೆ ಮಾಡಿದಾಗ ಮಹಿಳೆಯ ಶವ ಪತ್ತೆಯಾಗಿದೆ.

ಮೂಲಗಳ ಪ್ರಕಾರ, ನಾನ್ಕಿದೇವಿ ಮೂರ್ಛೆ ರೋಗದಿಂದ ಬಳಲುತ್ತಿದ್ರು, ಹಲವು ಬಾರಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಪತಿ ರಾಕೇಶ್‌ ತಿಳಿಸಿದ್ದಾರೆ.

Share This Article