ಬಿಹಾರ ಫಲಿತಾಂಶದಿಂದ ಕುಗ್ಗಿದ ಕಾಂಗ್ರೆಸ್ ಉತ್ಸಾಹ – ಕ್ರಾಂತಿ/ಪುನಾರಚನೆ ಜಪಕ್ಕೆ ತಾತ್ಕಾಲಿಕ ಬ್ರೇಕ್?

Public TV
3 Min Read

ಬೆಂಗಳೂರು: ಬಿಹಾರ ಫಲಿತಾಂಶ ಇಡೀ‌ ದೇಶದಲ್ಲೇ ಕಾಂಗ್ರೆಸ್ (Congress) ಪಡೆಯನ್ನು ಮಂಕಾಗಿಸಿದೆ. ರಾಜ್ಯದ ಮಟ್ಟಿಗೆ ಎಲ್ಲ‌ ಸಂಭಾವ್ಯ ಲೆಕ್ಕಾಚಾರಗಳನ್ನೂ ಉಲ್ಟಾ ಮಾಡಿದೆ. ಕ್ರಾಂತಿ ಅಥವಾ ಪುನಾರಚನೆ ಬಗ್ಗೆ ಹೈಕಮಾಂಡ್ ರಿಸ್ಕ್ ತೆಗೆದುಕೊಳ್ಳದೇ ಮುಂದೂಡಿಕೆ ತಂತ್ರಕ್ಕೆ ಮೊರೆ ಹೋಗಲಿದೆ ಎನ್ನಲಾಗಿದೆ‌. ಇನ್ನು ಈ ಮೂಲಕ ಸಿದ್ದರಾಮಯ್ಯ (Siddaramaiah) ಕುರ್ಚಿ ಅಬಾಧಿತ ಎಂಬ ಸಂದೇಶ ರವಾನೆಯಾಗಿದೆ.

ಬಿಹಾರ ಫಲಿತಾಂಶ (Bihar Election Results) ಬಳಿಕ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮುಂದೇನು ಅನ್ನೋ ಪ್ರಶ್ನೆ ಹುಟ್ಟಿಸಿದೆ. ಕಾಂಗ್ರೆಸ್‌ ಹೀನಾಯ ಸೋಲು ಕರ್ನಾಟಕದಲ್ಲಿ ಎದ್ದಿರೋ ಕ್ರಾಂತಿ ಬಿರುಗಾಳಿಗೆ ತಾತ್ಕಾಲಿಕ ಬ್ರೇಕ್ ಹಾಕುವ ಸಾಧ್ಯತೆ ತೋರಿಸಿದೆ. ಯಾಕೆಂದ್ರೆ ಈ ಸೋಲಿನಿಂದ ಕಾಂಗ್ರೆಸ್ ಹೈಕಮಾಂಡ್ ಶಕ್ತಿಗೆ ಭಾರೀ ಹಿನ್ನಡೆಯಾಗಿದೆ. ಹೀಗಾಗಿ ಕೈ ವರಿಷ್ಠರು ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಕಾಂಗ್ರೆಸ್ ಗೊಂದಲ‌ಗಳ ಬಗ್ಗೆ ಮೌನವಹಿಸೋ ಸಾಧ್ಯತೆಯೇ ಹೆಚ್ಚಾಗಿದೆ. ಇದನ್ನೂ ಓದಿ: ದೇಶದ ಟಾಪ್-3 ಮಾದರಿ ಪೊಲೀಸ್ ಠಾಣೆಯಲ್ಲಿ ರಾಯಚೂರಿನ ಕವಿತಾಳ ಸ್ಟೇಷನ್ – ಕೇಂದ್ರ ಗೃಹ ಇಲಾಖೆಯಿಂದ ಆಯ್ಕೆ

ಒಂದು ಕಡೆ ಈ ಫಲಿತಾಂಶ, ಡಿಕೆಶಿ ಟೀಮ್‌ಗಿದ್ದ ಅಧಿಕಾರ ಹಸ್ತಾಂತರ ಆಸೆಗೆ ತಣ್ಣೀರೆರಚಿದೆ. ಇನ್ನೊಂದು ಕಡೆ ಪುನಾರಚನೆ ಮಾಡಬೇಕೆಂಬ ಸಿಎಂ ಬೇಡಿಕೆಗೆ ಹೈಕಮಾಂಡ್ ಈಗಿನ ಸ್ಥಿತಿಯಲ್ಲಿ ಒಪ್ಪಿಗೆ ಕೊಡುತ್ತಾ ಅನ್ನೋ ಪ್ರಶ್ನೆಯೂ ಎದ್ದಿದೆ. ಹೈಕಮಾಂಡ್ ಸೋಲು ಸದ್ಯಕ್ಕೆ ಕರ್ನಾಟಕದಲ್ಲಿ ಬದಲಾವಣೆ ಪರ್ವಕ್ಕೆ ಕೈ ಹಾಕೋದಿಲ್ಲವಾ ಅನ್ನೋ ಚರ್ಚೆಗಳು ಪಕ್ಷದಲ್ಲೇ ಜೋರಾಗಿ ನಡೀತಿವೆ.‌

ಇಷ್ಟರ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಪ್ರತ್ಯೇಕವಾಗಿ ತೆರಳಿದ್ದಾರೆ. ಸಿಎಂ ಜತೆ ಆಪ್ತ ಸಚಿವರಾದ ಡಾ.ಹೆಚ್‌‌.ಸಿ ಮಹಾದೇವಪ್ಪ, ಬೈರತಿ ಸುರೇಶ್ ಹೊರಟಿದ್ರೆ, ಡಿಕೆಶಿ ಒಬ್ಬಂಟಿಯಾಗಿಯೇ ಹೋಗಿದ್ದಾರೆ. ಕಪಿಲ್ ಸಿಬಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಷ್ಟೇ ಇಬ್ಬರ ದೆಹಲಿ ಪ್ರವಾಸ ಸೀಮಿತವಾಗುತ್ತಾ ಅಥವಾ ಹೈಕಮಾಂಡ್ ನಾಯಕರ ಭೇಟಿಗೂ ಅವಕಾಶ ಸಿಗುತ್ತಾ ಅಂತ ಕಾದು ನೋಡಬೇಕಿದೆ. ವರಿಷ್ಠರು ಒಂದೊಮ್ಮೆ‌ ಸಿಕ್ಕರೂ ಏನು ಚರ್ಚೆ ನಡೆಯಲಿದೆ ಅನ್ನೋ ಕುತೂಹಲ ಮೂಡಿದೆ. ಇದನ್ನೂ ಓದಿ: ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು; ಮಾರಣಾಂತಿಕ ವೈರಸ್‌ಗೆ ಬಲಿಯಾಗಿರೋ ಶಂಕೆ!

ಬಿಹಾರ ಸೋಲು; ಕಾಂಗ್ರೆಸ್ ಹೈಕಮಾಂಡ್ ಮುಂದಿರುವ ಆಯ್ಕೆ ಏನು?
> ಸದ್ಯಕ್ಕೆ ನಾಯಕತ್ವ ಬದಲಾವಣೆ ಚರ್ಚೆಗೆ ತಾತ್ಕಾಲಿಕ ಬ್ರೇಕ್.
> ನಾಯಕತ್ವ ಬದಲಾವಣೆಗೆ ಕೈಹಾಕಿದ್ರೆ ಗೊಂದಲ ಜಾಸ್ತಿ ಆಗಬಹುದು ಅಂತ ಮೌನಕ್ಕೆ ಶರಣು.
> ನಾಯಕತ್ವ ಬದಲಾವಣೆ ಬದಲಿಗೆ ಕೇವಲ ಸಂಪುಟ ಪುನರ್ ರಚನೆಗೆ ಮಾತ್ರ ಅನುಮತಿ.
> ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಕ್ರಾಂತಿ ಶುರುವಾದ್ರೆ ಅದನ್ನ ನಿಯಂತ್ರಣ ಮಾಡೋದು ಹೈಕಮಾಂಡ್‌ಗೆ ಕಷ್ಟ. ಹೀಗಾಗಿ ಗೊಂದಲ ಬೇಡ ಅಂತ ಮೌನವಾಗೋದು. ‌
> ಸ್ವಲ್ಪ ದಿನ ಯಾವುದೇ ಗೊಂದಲ, ಗಲಾಟೆ ಏನು ಬೇಡ ಅಂತ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಚರ್ಚೆ ಎಲ್ಲದಕ್ಕೂ ಬ್ರೇಕ್ ಹಾಕೋದು.
> ಸಿಎಂ, ಡಿಸಿಎಂ ಇಬ್ಬರಿಗೂ ಪ್ರತ್ಯೇಕವಾಗಿ ಪರಿಸ್ಥಿತಿ ಮನವರಿಕೆ ಮಾಡಿಸುವುದು.

ಈ ನಡುವೆ ಬಿಹಾರ ಫಲಿತಾಂಶ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸ್ಥಿತಿಗೆ ಬಿಜೆಪಿ‌ ನಾಯಕರು ಲೇವಡಿ ‌ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಸಿದ್ದರಾಮಯ್ಯ ಸ್ಟ್ರಾಂಗ್ ಆಗ್ತಿದ್ದಾರೆ. ಇನ್ಮುಂದೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಮಾತು ಕೇಳಬೇಕು.‌ ಸಿಎಂಗೆ ಶುಕ್ರದೆಸೆ, ರಾಹುಲ್‌ಗೆ ರಾಹುಕಾಲ, ಡಿಕೆಶಿ ಮನೆಗೆ ಹೋಗುವ ಕಾಲ ಬಂದಿದೆ ಎಂದು ಅಶೋಕ್ ಕಾಲೆಳೆದಿದ್ದಾರೆ.‌ ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತಾಡಿ, ಕಾಂಗ್ರೆಸ್ ಗೆದ್ದಾಗ ಗೆಲುವು ಅಂತಾರೆ, ಸೋತರೆ ವೋಟ್ ಚೋರಿ ಅಂತಾರೆ. ರಾಹುಲ್ ಗಾಂಧಿ ಆ್ಯಂಡ್ ಟೀಂ ಹಿಟ್ ಆ್ಯಂಡ್ ರನ್ ಟೀಂ. ಬರೀ ಹಿಟ್ ಆ್ಯಂಡ್ ರನ್ ಮಾಡೋದಷ್ಟೇ ಅವರ ಕೆಲಸ ಎಂದು ಕಿಡಿ ಕಾರಿದ್ರು.

ಒಟ್ಟಿನಲ್ಲಿ ಕಾಂಗ್ರೆಸ್ ಪರಿಸ್ಥಿತಿ ಅಯೋಮಯ ಆಗಿದೆ. ಇಂದು ಸಿಎಂ, ಡಿಸಿಎಂ ದೆಹಲಿಯಲ್ಲಿರೋ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

Share This Article