– ನಾನು ಯಾವುದೇ ರೀತಿ ಕಿರುಕುಳ ನೀಡಿಲ್ಲ, ಅವಳೇ ನನಗೆ ಮೋಸ ಮಾಡಿದ್ದಾಳೆ ಎಂದ ಆರೋಪಿ
ಬೆಂಗಳೂರು: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು 3 ಕೋಟಿ ರೂ. ಖರ್ಚು ಮಾಡಿ, ಸೈಟ್, ದುಬಾರಿ ಕಾರು ಕೊಡಿಸಿದ್ದೆ. ಆದರೆ ಅವಳು ಬೇರೆಯವನ ಜೊತೆ ಕಾಣಿಸಿಕೊಳ್ಳುತ್ತಿದ್ದಳು ಎಂದು ಉದ್ಯಮಿ ಅರವಿಂದ್ ರೆಡ್ಡಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಗೋವಿಂದರಾಜನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಬ್ರಹ್ಮಣಿ ಆರೋಪಿಯ ವಿಚಾರಣೆ ನಡೆಸಿದ್ದು, ಈ ವೇಳೆ ಕೆಲವು ಮಾಹಿತಿ ನೀಡಿದ್ದಾನೆ. ನಟಿಗಾಗಿ ನಾನು ಮೂರು ಕೋಟಿ ರೂ. ಹಣ ಖರ್ಚು ಮಾಡಿದ್ದೇನೆ. ಸೈಟ್, ಮನೆ ಕೊಡಿಸಿದ್ದೇನೆ. ದುಬಾರಿ ಕಾರನ್ನು ಗಿಫ್ಟ್ ಮಾಡಿದ್ದೇನೆ. ಆದರೆ ಅವಳು ನನ್ನ ಬಿಟ್ಟು ಬೇರೆ ವ್ಯಕ್ತಿ ಜೊತೆಗೆ ಕಾಣಿಕೊಳ್ಳುತ್ತಿದ್ದಳು. ನಾನು ಯಾವುದೇ ಕಿರುಕುಳ ನೀಡಿಲ್ಲ, ಅವಳೇ ನನಗೆ ಮೋಸ ಮಾಡಿದ್ದಾಳೆಂದು ಆರೋಪಿ ಹೇಳಿಕೊಂಡಿದ್ದಾನೆ.ಇದನ್ನೂ ಓದಿ: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ಆರೋಪ – ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಬಂಧನ
ಏನಿದು ಪ್ರಕರಣ?
ಅರವಿಂದ್ ರೆಡ್ಡಿ ಎವಿಆರ್ ಗ್ರೂಪ್ ಮಾಲೀಕನಾಗಿದ್ದ. 2021ರಲ್ಲಿ ಪರಿಚಯವಾಗಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐದು ದಿನದ ಹಿಂದೆ ಈ ಪ್ರಕರಣ ಗೋವಿಂದರಾಜನಗರ ಠಾಣೆಗೆ ವರ್ಗಾವಣೆಗೊಂಡಿತ್ತು. ಅದರಂತೆ ಆರೋಪಿ ಬಂಧನಕ್ಕೆ ಎಸಿಪಿ ಚಂದನ್ ಮತ್ತು ಸುಬ್ರಹ್ಮಣಿ ತಂಡ ರಚಿಸಲಾಗಿತ್ತು.
ಈ ಮೊದಲು ಆರೋಪಿ ಬಂಧನಕ್ಕೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಆದರೆ ಇಂದು (ನ.15) ಬೆಳಗಿನ ಜಾವ ಶ್ರೀಲಂಕಾದಿಂದ ಬರುವಾಗ ಆರೋಪಿಯನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅರವಿಂದ್ ರೆಡ್ಡಿ ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕನಾಗಿದ್ದ. ಅಲ್ಲದೇ ಚಲನಚಿತ್ರ ನಿರ್ಮಾಪಕ ಆಗಿರುವ ಅರವಿಂದ್ ರೆಡ್ಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ. ಚಲನಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಕೂಡ ಆಯೋಜಿಸಿದ್ದ. ಅರವಿಂದ್ ರೆಡ್ಡಿ ಒಡೆತನದ ಎವಿಆರ್ ಗ್ರೂಪ್ ದುಬೈ, ಶ್ರೀಲಂಕಾ ಸೇರಿದಂತೆ ಹಲವು ಕಡೆ ನಡೆದ ಟೂರ್ನಮೆಂಟ್ಗೆ ಸ್ಪಾನ್ಸರ್ ಮಾಡಿತ್ತು.ಇದನ್ನೂ ಓದಿ: ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ನಟಿ ನಯನತಾರಾ ದಂಪತಿ ಭೇಟಿ
