ದೆಹಲಿ ಸ್ಫೋಟ ಬೆನ್ನಲ್ಲೇ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ – 500 ಕಡೆ ದಾಳಿ, 600 ಮಂದಿ ವಶಕ್ಕೆ

Public TV
2 Min Read

ಶ್ರೀನಗರ: ದೆಹಲಿ ಸ್ಫೋಟ (Delhi Blast) ಬೆನ್ನಲ್ಲೇ ಪೊಲೀಸರು ಹಾಗೂ ಭದ್ರತಾ ಪಡೆಗಳು (Indian Army) ಕಾಶ್ಮೀರದಲ್ಲಿ (Kashmir) 500ಕ್ಕೂ ಹೆಚ್ಚು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಇಐ) ಸದಸ್ಯರ ಮನೆಗಳ ಮೇಲೆ ಸಹ ದಾಳಿ ನಡೆಸಲಾಗಿದ್ದು, ಕನಿಷ್ಠ 600 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ನ.10 ರಂದು ನವದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ 13 ನಾಗರಿಕರು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ದಕ್ಷಿಣ ಕಾಶ್ಮೀರದ ಮೂವರು ವೈದ್ಯರ ಪಾತ್ರವಿದ್ದು, ಆ ಭಾಗದಲ್ಲಿ ತೀವ್ರ ನಿಗವಹಿಸಲಾಗಿದೆ. ಈ ಪ್ರಕರಣದ ಬಳಿಕ ಕಾಶ್ಮೀರದಲ್ಲಿ ಶಂಕಿತರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: Delhi Blast | ಸ್ಫೋಟದ ರೂವಾರಿ ಉಮರ್‌ನ ನಿವಾಸ ಉಡೀಸ್

ಶ್ರೀನಗರದಲ್ಲಿ ಪೊಲೀಸರು ವೈದ್ಯ ತಜಮುಲ್ ಅಹ್ಮದ್ ಮಲಿಕ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರ ತಂದೆ ಮೊಹಮ್ಮದ್ ಅಯೂಬ್ ಮಲಿಕ್, ದೆಹಲಿ ಸ್ಫೋಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಹರಡುತ್ತಿರುವ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದಿದ್ದಾರೆ.

ಕುಲ್ಗಾಮ್‌ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ 400ಕ್ಕೂ ಹೆಚ್ಚು ಕಾರ್ಡನ್-ಅಂಡ್-ಸರ್ಚ್ ಕಾರ್ಯಾಚರಣೆಗಳು (CASOs) ನಡೆದಿವೆ. ಈ ಕಾರ್ಯಾಚರಣೆಗಳಲ್ಲಿ JKNOPs (ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ J&K ನ್ಯಾಷನಲ್ಸ್) ಮತ್ತು ಇತರ ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಸುಮಾರು 500 ಜನರ ವಿಚಾರಣೆ ನಡೆದಿದೆ. ಹಲವರನ್ನು ವಶಕ್ಕೆ ಪಡೆದು ಅನಂತ್‌ನಾಗ್‌ನ ಮಟ್ಟನ್ ಜೈಲಿಗೆ ಸ್ಥಳಾಂತರಿಸಲಾಗಿದೆ.

ಬಾರಾಮುಲ್ಲಾದ ಸೋಪೋರ್‌, ಜೈಂಗೀರ್ ಮತ್ತು ರಫಿಯಾಬಾದ್ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ಭಾಗದಲ್ಲಿ ಜೆಇಐ-ಸಂಬಂಧಿತ ಗುಂಪು ತಮ್ಮ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ಪ್ರಯತ್ನಿಸುತ್ತಿವೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಶೋಧಗಳು ನಡೆದಿವೆ. ನಿಷೇಧಿತ ಸಂಘಟನೆಯ ದಾಖಲೆಗಳು, ಡಿಜಿಟಲ್ ಗ್ಯಾಜೆಟ್‌ಗಳು ಮತ್ತು ಪೋಸ್ಟರ್‌ಗಳು ಸೇರಿದಂತೆ ಅಪಾರ ಪ್ರಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪುಲ್ವಾಮಾದ ಅವಂತಿಪೋರಾದಲ್ಲಿ, ಜೆಇಐ ಸದಸ್ಯರ ಹಲವಾರು ಮನೆಗಳ ಮೇಲೆಯೂ ದಾಳಿ ನಡೆಸಲಾಗಿದೆ. ಇನ್ನೂ ವಶಕ್ಕೆ ಪಡೆದವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಗಳು ಭಯೋತ್ಪಾದನೆ-ಪ್ರತ್ಯೇಕತಾವಾದಿಗಳನ್ನು ಕಿತ್ತುಹಾಕುವುದು, ಅವರ ಸೈದ್ಧಾಂತಿಕ, ಹಣಕಾಸು ಮತ್ತು ಲಾಜಿಸ್ಟಿಕ್‌ ಜಾಲಗಳನ್ನು ತಡೆಯುವುದು ಮತ್ತು ಶಾಂತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಗುರಿ ಹೊಂದಿದೆ. ಇದನ್ನೂ ಓದಿ: 7.50 ಕೋಟಿ ವಂಚನೆ ಕೇಸಲ್ಲಿ ಮೂರು ವರ್ಷ ಜೈಲಲ್ಲಿದ್ದ ಅಲ್‌ ಫಲಾಹ್‌ ಯೂನಿವರ್ಸಿಟಿ ಸಂಸ್ಥಾಪಕ

Share This Article