ವಿಕಸಿತ್ ಬಿಹಾರದ ಮೇಲೆ ನಂಬಿಕೆಯಿಟ್ಟ ಪ್ರತಿಯೊಬ್ಬ ಬಿಹಾರಿಯ ಗೆಲುವಿದು: ಅಮಿತ್ ಶಾ

Public TV
3 Min Read

– ಬಿಹಾರದ ಜನ ʻಜಂಗಲ್ ರಾಜ್‌ʼಗೆ ನೋ ಅಂದ್ರು: ಜೆಪಿ ನಡ್ಡಾ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ 2025ರ ಸ್ಪಷ್ಟ ಫಲಿತಾಂಶ (Bihar Election Result 2025) ಹೊರ ಬಿದ್ದಿದೆ. ಬಿಹಾರದ ಬಾಸ್ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಅಮಿತ್ ಶಾ ಭವಿಷ್ಯದಂತೆ ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಚುನಾಣಾ ಫಲಿತಾಂಶದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹರ್ಷ ವ್ಯಕ್ತಪಡಿಸಿದ್ದು, ಇದು ʻವಿಕಸಿತ್ ಬಿಹಾರʼದ ಮೇಲೆ ನಂಬಿಕೆಯಿಟ್ಟ ಬಿಹಾರಿಗಳ ಗೆಲುವು ಎಂದು ಬಣ್ಣಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻಅಭಿವೃದ್ಧಿ ಹೊಂದಿದ ಬಿಹಾರʼದಲ್ಲಿ ನಂಬಿಕಯಿಡುವ ಪ್ರತಿಯೊಬ್ಬ ಬಿಹಾರಿಯ ಗೆಲುವು ಇದು. ʻಜಂಗಲ್‌ ರಾಜ್‌ʼ ಮತ್ತು ತುಷ್ಟೀಕರಣ ರಾಜಕೀಯ ಮಾಡುವವರು ಯಾವುದೇ ವೇಷ ಧರಿಸಿ ಬಂದರೂ, ಅವರಿಗೆ ಲೂಟಿ ಮಾಡೋದಕ್ಕೆ ಅವಕಾಶ ಸಿಗಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಜನರು ಈಗ ಅಭಿವೃದ್ಧಿಯ ಆಧಾರದ ಮೇಲೆ ಮತದಾರರು ತಮ್ಮ ಜನಾದೇಶ ನೀಡುತ್ತಾರೆ ಎಂದು ವಿಪಕ್ಷಗಳಿಗೆ ಕುಟುಕಿದ್ದಾರೆ.

ಬಿಹಾರದ ಗೆಲುವಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಜಿ, ನಿತೀಶ್‌ ಕುಮಾರ್‌ ಜಿ ಹಾಗೂ ಎಲ್ಲಾ ಎನ್‌ಡಿಎ ನಾಯಕರು ಮತ್ತು ಕಾರ್ಯಕರ್ತರಿಗೆ ಹಾಗೂ ದಣಿವರಿಯದೇ ತಮ್ಮ ಕಠಿಣ ಪರಿಶ್ರಮದ ಮೂಲಕ ಫಲಿತಾಂಶ ನಿಜವಾಗಿಸಿದ ಬಿಹಾರದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

ಮುಂದುವರಿದು… ಮೋದಿ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರದ (NDA Government) ಮೇಲೆ ನೀವು ಇಟ್ಟಿರುವ ಭರವಸೆ ಮತ್ತು ನಂಬಿಕೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಜನಾದೇಶವನ್ನ ಪೂರೈಲು ಶ್ರಮಿಸುತ್ತದೆ ಎಂದು ಬಿಹಾರದ ಜನತೆ ಹಾಗೂ ಎಲ್ಲಾ ತಾಯಂದಿರು, ಸಹೋದರಿಯರಿಗೆ ಭರವಸೆ ನೀಡುತ್ತೇನೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ʻಜಂಗಲ್‌ ರಾಜ್‌ʼ ತಿರಸ್ಕರಿಸಿದ್ದಾರೆ: ನಡ್ಡಾ
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಬಿಹಾರದ ಜನರಿಗೆ ಶುಭಾಶಯಗಳು. ʻಜೈ ಸೀತಾ ರಾಮ್ʼ ಎಂಬ ಸಂದೇಶ ಹಂಚಿಕೊಂಡಿದ್ದಾರೆ.

ಬಿಹಾರದಲ್ಲಿ ಎನ್‌ಡಿಎ ಪಡೆದ ಐತಿಹಾಸಿಕ ಸಾರ್ವಜನಿಕ ಬೆಂಬಲವು ಪ್ರಧಾನಿ ಮೋದಿ, ಸಿಎಂ ನಿತೀಶ್‌ ಜಿ ಅವರ ಡಬಲ್-ಎಂಜಿನ್ ಸರ್ಕಾರದ ಅಭಿವೃದ್ಧಿ-ಆಧಾರಿತ ಮತ್ತು ಸಾರ್ವಜನಿಕ ಕಲ್ಯಾಣ ನೀತಿಗಳಲ್ಲಿ ಜನ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಬಿಹಾರದಲ್ಲಿರುವ ನಮ್ಮ ಸಹೋದರ ಸಹೋದರಿಯರು ಮಹಾ ಮೈತ್ರಿಕೂಟದ ʻಜಂಗಲ್ ರಾಜ್ ಮತ್ತು ಭ್ರಷ್ಟಾಚಾರʼವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಉತ್ತಮ ಆಡಳಿತ, ಸ್ಥಿರತೆ ಮತ್ತು ಅಭಿವೃದ್ಧಿಯ ಎನ್‌ಡಿಎಯ ದೃಷ್ಟಿಕೋನವನ್ನ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಈ ಐತಿಹಾಸಿಕ ಗೆಲುವಿಗಾಗಿ ಶ್ರಮಿಸಿದ ಎನ್‌ಡಿಎ ಪಕ್ಷಗಳ ಎಲ್ಲಾ ಸದಸ್ಯರು ಮತ್ತು ಬಿಹಾರದ ಬಿಜೆಪಿ ಕಾರ್ಯಕರ್ತರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

Share This Article