ಭವಿಷ್ಯ ನುಡಿಯಲು ಅವರ‍್ಯಾರು, ಜ್ಯೋತಿಷಿನಾ? – ಡಿಕೆಶಿ ವಿರುದ್ಧ ನಿಖಿಲ್‌ ಆಕ್ರೋಶ

Public TV
2 Min Read

ರಾಮನಗರ: ಭವಿಷ್ಯ ನುಡಿಯಲು ಅವರು ಯಾರು? ರಾಜ್ಯದ ಜನ ನಮ್ಮ ಭವಿಷ್ಯ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ತಿರುಗೇಟು ನೀಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ (JDS) 8 ರಿಂದ 9ನೇ ಸ್ಥಾನಕ್ಕೆ ಇಳಿಯಲಿದೆ ಎಂಬ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಭವಿಷ್ಯ ಹೇಳಲು ಅವರೇನು ಜ್ಯೋತಿಷ್ಯೀನಾ? ಅವರು ಭವಿಷ್ಯ ನುಡಿಯಲಿ. ಸಮಯ ಬಂದಾಗ ಮಾತನಾಡುತ್ತೇವೆ ಎಂದು ಟಾಂಗ್ ನೀಡಿದರು.

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡುತ್ತಿದ್ದಾರೆ. ಸರ್ಕಾರದ ಖಾತಾ ಪರಿವರ್ತನೆ ಹೆಸರಿನಲ್ಲಿ ಸರ್ಕಾರ ಒಂದು ಲಕ್ಷ ಕೋಟಿ ರೂ. ಆದಾಯ ತರಲು ಹೊರಟಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದು ಆದಾಯ ತರಲು ಹೊರಟಿದ್ದಾರೆ. ಜನರಿಗೆ ಒಳ್ಳೆಯದು ಮಾಡಬೇಕೆಂದರೆ ಅವತ್ತಿನ ಎಸ್‌ಆರ್‌ ವ್ಯಾಲ್ಯೂ ಮೇಲೆ ದರ ನಿಗದಿ ಮಾಡಿ ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.  ಇದನ್ನೂ ಓದಿ:  ಉತ್ತರ ಭಾರತದಲ್ಲಿ ಕಾಂತಾರ ಸಿನಿಮಾ ಹವಾ: ಬಾಕ್ಸಾಫೀಸ್‌ನಲ್ಲಿ 200 ಕೋಟಿ ಕ್ಲಬ್!

ಬೆಂಗಳೂರಲ್ಲಿ 7.5 ಲಕ್ಷ ಮನೆಗಳು ಇದಕ್ಕೆ ಒಳಪಡುತ್ತವೆ. ಅದಕ್ಕೆ 100 ದಿನ ಟೈಂ ಲೈನ್ ನಿಗದಿ ಮಾಡಿದ್ದಾರೆ. ಖಾತೆ ವರ್ಗಾವಣೆಗೆ ಒಂದೊಂದು ಕಡೆ ಒಂದೊಂದು ಎಸ್‌ಆರ್‌ ವ್ಯಾಲ್ಯೂ ಇದೆ. ಇದರಿಂದ ಮಾಧ್ಯಮ ವರ್ಗದ ಜನರಿಗೆ ತೊಂದರೆಯಾಗಲಿದೆ. ಜನರಿಗೆ ಒತ್ತಡ ಹೇರಿ ಅವರ ಬಳಿ ಹಣ ಕಸಿದು ಅವರಿಗೆ ಗ್ಯಾರಂಟಿ ರೂಪದಲ್ಲಿ ವಾಪಸ್‌ ಕೊಡುತ್ತಾರೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ (Kumaraswamy) ಖಾಲಿ ಟ್ರಂಕ್ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು ಕುಮಾರಣ್ಣ ಅವರ ಕಾಲಘಟ್ಟದಲ್ಲಿ ಏನೇನು ಮಾಡಿದ್ದಾರೆ ಅಂತ ರಾಜ್ಯದ ಜನತೆಗೆ ಗೊತ್ತು. ಅಧಿಕಾರದಲ್ಲಿದ್ದಾಗ ನೀಡಿದ ಕಾರ್ಯಕ್ರಮ ಜನರ ಮನಸ್ಸಿನಲ್ಲಿದೆ. ಅದನ್ನು ಚುನಾವಣೆ ಸಂದರ್ಭದಲ್ಲಿ ಏನೆಲ್ಲಾ ಮಾಡಿದ್ದಾರೆ ಮಾತನಾಡುತ್ತೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:  ಕುಮಾರಸ್ವಾಮಿಯವರನ್ನ ಸಿಎಂ ಕುರ್ಚಿಯಲ್ಲಿ ಕೂರಿಸೋದೆ ನನ್ನ ಗುರಿ, ನನಗೆ ಅಧಿಕಾರ ಬೇಕಿಲ್ಲ: ನಿಖಿಲ್

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಶೂನ್ಯ. ಶಾಸಕರಿಗೆ ಅನುದಾನ ಕೊಡುತ್ತೇವೆ ಎಂದು ಹೇಳಿ ಏನೂ ಕೊಟ್ಟಿಲ್ಲ. ಒಬ್ಬ ಶಾಸಕನಿಗೆ 10 ಕೋಟಿ ರೂ. ಅನುದಾನವೂ ಸಿಕ್ಕಿಲ್ಲ. ಬಿಜೆಪಿ-ಜೆಡಿಎಸ್ (BJP-JDS) ಬಿಡಿ ಕಾಂಗ್ರೆಸ್ ಶಾಸಕರೇ ಅನುದಾನ ಸಿಕ್ಕಿಲ್ಲ ಅಂತ ಹೇಳ್ತಾರೆ. ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಕಾಲಘಟ್ಟದಲ್ಲಿ ಅಭಿವೃದ್ಧಿ ಆಗ್ತಿಲ್ಲ ಎಂದು ಕಿಡಿಕಾರಿದರು.

ನವೆಂಬರ್ ಕ್ರಾಂತಿ ಅಂತ ಮಾತಾಡ್ತಾರೆ. ಅದೇನು ಕ್ರಾಂತಿ ಮಾಡ್ತಾರೋ ನೋಡೊಣ. ಇವರ ಕುರ್ಚಿ ಕಿತ್ತಾಟದ ನಡುವೆ ರಾಜ್ಯದ ಜನ ಬಲಿಪಶು ಆಗ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Share This Article