ರಾಜ್ಯದ ಹಲವೆಡೆ ಭಾನುವಾರ (ಅ.19) ಸುರಿದ ಮಳೆಗೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ಧಾರಾಕಾರ ಮಳೆಗೆ ರೈತರ ಜಮೀನುಗಳು ಜಲಾವೃತವಾಗಿವೆ. ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಮನೆಗಳು ಜಲಾವೃತವಾಗಿವೆ. ಗದ್ದೆಗಳು, ತೋಟಗಳಿಗೆ ನೀರು ನುಗ್ಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಹಾಸನ ಜಿಲ್ಲೆಯ ವಿವಿಧೆಡೆ ಭಾನುವಾರ (ಅ.19) ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹೊಳೆನರಸೀಪುರ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕೆರೆಕೋಡಿ ಬಿದ್ದಿದೆ. ಇದರಿಂದಾಗಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ನೂರಾರು ಎಕರೆ ಪ್ರದೇಶದ ರೈತರ ಜಮೀನು ಸಂಪೂರ್ಣ ಜಲಾವೃತಗೊಂಡಿದೆ. 150ಕ್ಕೂ ಹೆಚ್ಚು ಪ್ರದೇಶದಲ್ಲಿರುವ ಕೆರೆ ಇದಾಗಿದ್ದು, ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಮನೆಯಿಂದ ಆಚೆ ಬರಲಾರದ ಸ್ಥಿತಿ ನಿರ್ಮಾಣವಾಗಿದ್ದು ಅಡಿಕೆ, ತೆಂಗಿನ ತೋಟ, ಹೊಲ, ಗದ್ದೆಗಳು ಸಂಪೂರ್ಣ ಜಲಾವೃತವಾಗಿದೆ.ಇದನ್ನೂ ಓದಿ: ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು – 11ಕ್ಕೂ ಹೆಚ್ಚು ಜನ ಅಸ್ವಸ್ಥ
ಅರಸೀಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲಿ ಬಂದಿವೆ. ಕಳೆದ ಎರಡು ದಿನಗಳಿಂದ ಶಂಕರಲಿಂಗಪ್ಪ ಎಂಬುವವರ ಮನೆಗೆ ನೀರು ನುಗ್ಗುತ್ತಿದ್ದು, ರಾತ್ರಿಯಿಡಿ ನೀರು ಹೊರಹಾಕಲು ಕುಟುಂಬಸ್ಥರು ಹರಸಾಹಸ ಪಟ್ಟಿದ್ದಾರೆ. ಹೊಳೆನರಸೀಪುರ ಪಟ್ಟಣದ ಕಾರ್ಖಾನೆ ಬೀದಿಯಲ್ಲೂ ಮಂಜು ಎಂಬುವವರ ಮನೆಗೂ ನೀರು ನುಗ್ಗಿದೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ನೀರು ಹೊರಹಾಕುವ ಕಾರ್ಯ ಮಾಡಿದರು.
ಇನ್ನೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲೂ ವ್ಯಾಪಕ ಮಳೆಯಾಗಿದೆ. ಮಿಂಚು, ಗುಡುಗು, ಸಿಡಿಲು ಹಾಗೂ ಗಾಳಿಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿದ್ದು, ತೆಂಗು ಹಾಗೂ ಕೃಷಿ ಜಮೀನುಗಳು ಜಲಾವೃತವಾಗಿದೆ. ತಾಲೂಕಿನ ಬಹುತೇಕ ಕೆರೆಕಟ್ಟೆಗಳಲ್ಲಿ ಶೇ.50 ರಿಂದ 60ರಷ್ಟು ನೀರು ಸಂಗ್ರಹವಾಗಿದೆ. ಒಂದ್ಕಡೆ ರೈತರ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ರೆ, ಮತ್ತೊಂದು ಕಡೆ ಉತ್ತಮ ಮಳೆಯಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಅರಳೀಕೆರೆ ಸಮೀಪ ಹಳ್ಳತುಂಬಿ ಹರಿಯುತ್ತಿದೆ. ಹಳ್ಳದ ನೀರು ಹರಿದು ಟೊಮೆಟೊ, ಈರುಳ್ಳಿ ಬೆಳೆ ಜಲಾವೃತವಾಗಿದೆ. ಹಿರಿಯೂರು ತಾಲ್ಲೂಕಿನ ಅರಳೀಕೆರೆ ಗೊಲ್ಲರಹಟ್ಟಿಯ ಮುದ್ದಣ್ಣಗೆ ಸೇರಿದ ಎರಡು ಎಕರೆಯಲ್ಲಿ ಬೆಳೆದ ಟೊಮ್ಯಾಟೊ ಜಲಾವೃತದಿಂದ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ಮತ್ತು ದಾಳಿಂಬೆ ಬೆಳೆಗಾರರಿಗೂ ಸಂಕಷ್ಟ ಎದುರಾಗಿದೆ.ಇದನ್ನೂ ಓದಿ: ಶಿವಮೊಗ್ಗ | ಕಾರ್ಗಲ್ ಬಳಿ ಪ್ರವಾಸಿಗರ ಬಸ್ ಪಲ್ಟಿ – 18 ಮಂದಿಗೆ ಗಾಯ
ಮಂಡ್ಯದಲ್ಲಿ ಕಳೆದ ರಾತ್ರಿ ಹಲವೆಡೆ ಮಳೆಯಾಗಿದ್ದು, ನಾಗಮಂಗಲದ ಟಿಬಿ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆ ಕಟ್ಟಲು ವ್ಯಕ್ತಿಯೊಬ್ಬ ಚರಂಡಿಗೆ ಮಣ್ಣು ತುಂಬಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ 7-8 ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಇಡೀ ನಿದ್ದೆ ಇಲ್ಲದೆ ಇಲ್ಲಿನ ಜನರು ಕಂಗಾಲಾಗಿದ್ರು. ಮನೆಯಲ್ಲಿದ್ದ ದವಸ-ಧಾನ್ಯಗಳು ನೀರು ಪಾಲಾಗಿದೆ. ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮುಚ್ಚಿರುವ ಚರಂಡಿಯನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಕಾಫಿನಾಡು ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಭಾರೀ ಮಳೆಯಾಗಿದೆ. ಕಡೂರು ತಾಲೂಕಿನ ಎಸ್.ಮಾದಾಪುರ ಕೆರೆ ಸಂಪೂರ್ಣ ಭರ್ತಿಯಾಗಿದೆ. ಒಂದೇ ರಾತ್ರಿ ಸುರಿದ ಮಳೆಗೆ ಸುಮಾರು 15 ಎಕರೆ ವಿಸ್ತೀರ್ಣದ ಕೆರೆ ಭರ್ತಿಯಾಗಿದೆ. ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿನಲ್ಲಿ ಕೆರೆ ಕೋಡಿ ಬಿದ್ದಿದ್ದನ್ನು ಕಂಡು ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಚಾಮರಾಜನಗರದಲ್ಲಿ ಸತತ ಮಳೆಯಿಂದಾಗಿ ತಮಿಳುನಾಡಿನ ದಿಂಬಂ ಘಾಟ್‌ನಲ್ಲಿ ಮಣ್ಣು ಕುಸಿದಿದೆ. ಪರಿಣಾಮ ಕರ್ನಾಟಕ-ತಮಿಳುನಾಡಿಗೆ ಸಂಚಾರ ಮಾಡುವವರಿಗೆ ಸಂಕಷ್ಟ ಎದುರಾಗಿದೆ. ಮಣ್ಣು ರಸ್ತೆಗೆ ಬಿದ್ದಿರುವ ಹಿನ್ನಲೆ, ಟ್ರಾಫಿಕ್ ಜಾಮ್ ಉಂಟಾಗಿದೆ.
ಇನ್ನೂ ಬೆಂಗಳೂರಿಗೆ ಇಂದು ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿಗಿಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿಯು ಗಂಟೆಗೆ 30-40ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.ಇದನ್ನೂ ಓದಿ: ದೇವಿರಮ್ಮ ಬೆಟ್ಟ ಏರುವಾಗ ಇಬ್ಬರು ಅಸ್ವಸ್ಥ – ಬೆಟ್ಟದಿಂದ ಹೊತ್ತುತಂದ ಅಗ್ನಿಶಾಮಕ ಸಿಬ್ಬಂದಿ