ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

Public TV
3 Min Read

– ನೌಕಾಪಡೆ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ

ಪಣಜಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಗೋವಾ ಕರಾವಳಿಯಲ್ಲಿ (Goa Coast) ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸಿದರು. ಗೋವಾದ ಕಾರವಾರ ಕರಾವಳಿಯಲ್ಲಿರುವ ಐಎನ್ಎಸ್ ವಿಕ್ರಾಂತ್‌ಗೆ ಭೇಟಿ ನೀಡಿದ ಅವರು ನೌಕಾಪಡೆ ಸೇನಾ ಸಿಬ್ಬಂದಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ್ರು. ಈ ವೇಳೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಐಎನ್‌ಎಸ್‌ ವಿಕ್ರಾಂತ್‌ ಹಾಗೂ ಬ್ರಹ್ಮೋಸ್‌ (BrahMos), ಆಕಾಶ್‌ ಕ್ಷಿಪಣಿಗಳ ಸಾಮರ್ಥ್ಯವನ್ನು ಕೊಂಡಾಡಿದರು.

ಇಂದು ಅದ್ಭುತ ದಿನ, ಈ ದೃಶ್ಯ ಅವಿಸ್ಮರಣೀಯ. ಈ ದಿನ ನನ್ನ ಬಳಿ ಒಂದು ಕಡೆ ಸಾಗರವಿದೆ, ಮತ್ತೊಂದೆಡೆ ಭಾರತ ಮಾತೆಯ ವೀರ ಸೈನಿಕರ ಬಲವಿದೆ. ಇನ್ನೊಂದೆಡೆ ಅನಂತ ದಿಗಂತ, ಅನಂತ ಆಕಾಶ ಹಾಗೂ ಅನಂತ ಶಕ್ತಿಯ ಸಂಕೇತವಾದ ಐಎನ್ಎಸ್ ವಿಕ್ರಾಂತ್ (INS Vikrant) ಇದೆ. ಸಾಗರ ನೀರಿನ ಮೇಲೆ ಹೊಳೆಯುವ ಸೂರ್ಯನ ಕಿರಣಗಳು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ನೌಕಾಪಡೆಯ ಎಲ್ಲಾ ವೀರ ಸೈನಿಕರೊಂದಿಗೆ ಪವಿತ್ರ ಹಬ್ಬ ದೀಪಾವಳಿ (Deepavali Festival) ಆಚರಿಸುತ್ತಿರುವುದು ನನ್ನ ಅದೃಷ್ಟ. ಐಎನ್ಎಸ್ ವಿಕ್ರಾಂತ್ ಸ್ವಾವಲಂಬಿ ಭಾರತದ ಸಂಕೇತ, ನಾನು ನಮ್ಮ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದ್ರೆ ಈ ಮೂರು ಪಡೆಗಳ ಪ್ರಚಂಡ ಸಮನ್ವಯವು ಪಾಕಿಸ್ತಾನವನ್ನು (Pakistan) ಆಪರೇಷನ್ ಸಿಂಧೂರದಲ್ಲಿ ಶರಣಾಗುವಂತೆ ಮಾಡಿತು. ಬ್ರಹ್ಮೋಸ್‌ ಆಕಾಶ್‌ ನಂತರ ಕ್ಷಿಪಣಿಗಳು ಆಪರೇಷನ್‌ ಸಿಂಧೂರದಲ್ಲಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿವೆ. ಹೀಗಿ ಇಂದು ಪ್ರಪಂಚದಾದ್ಯಂತ ಹಲವಾರು ದೇಶಗಳು ಈಗ ಬ್ರಹ್ಮೋಸ್‌ ಕ್ಷಿಪಣಿ ಖರೀದಿಸಲು ಆಸಕ್ತಿ ತೋರಿವೆ ಎಂದು ಮೋದಿ ಹೇಳಿದರು.

ನಾನು ಮಿಲಿಟರಿ ಉಪಕರಣಗಳ ಶಕ್ತಿಯನ್ನು ನೋಡುತ್ತಿದ್ದೆ, ಈ ಬೃಹತ್ ಹಡಗುಗಳು, ಗಾಳಿಗಿಂತಲೂ ವೇಗವಾಗಿ ಹಾರುವ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಅವು ತಮ್ಮಲ್ಲಿಯೇ ಪ್ರಭಾವಶಾಲಿಯಾಗಿವೆ. ಇದರ ಜೊತೆಗೆ ಅವುಗಳನ್ನು ನಿರ್ವಹಿಸುವವರ ಶೌರ್ಯ ಸಾಹಸ, ಅವುಗಳನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡುತ್ತವೆ. ಉದಾಹರಣೆಗೆ ಈ ಹಡಗುಗಳು ಕಬ್ಬಿಣದಿಂದಲೇ ಮಾಡಿರಬಹುದು ಆದ್ರೆ, ನೀವು ಹತ್ತಿದಾಗ ಅವು ಜೀವಂತ ಹಾಗೂ ಉಸಿರಾಟ ಇರುವ ಶಕ್ತಿಶಾಲಿ ಅಸ್ತ್ರಗಳಾಗಿ ಬದಲಾಗುತ್ತವೆ ಎಂದು ಸೈನಿಕರನ್ನ ಶೌರ್ಯವನ್ನು ಹಾಡಿಹೊಗಳಿದರು.

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಅವರು ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 2014ರಲ್ಲಿ ಲಡಾಖ್‌ನಲ್ಲಿರುವ ಸಿಯಾಚಿನ್ ಹಿಮನದಿಗೆ ಭೇಟಿ ನೀಡಿದ್ದರು. 2015 ರಲ್ಲಿ, ಅವರು 1965ರ ಭಾರತ-ಪಾಕಿಸ್ತಾನ ಯುದ್ಧದ ವೀರರಿಗೆ ಗೌರವ ಸಲ್ಲಿಸಲು ಪಂಜಾಬ್‌ನ ಅಮೃತಸರದಲ್ಲಿರುವ ಡೋಗ್ರೈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. 2016 ರಲ್ಲಿ, ದೀಪಾವಳಿಯಂದು ಹಿಮಾಚಲ ಪ್ರದೇಶದ ಭಾರತ-ಚೀನಾ ಗಡಿಯ ಬಳಿ ಗಡಿ ಭದ್ರತಾ ಪಡೆ ಮತ್ತು ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿದರು. 2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯದಲ್ಲಿ ಭದ್ರತಾ ಪಡೆಗಳನ್ನು ಭೇಟಿ ಮಾಡಿದರು. 2018 ರಲ್ಲಿ, ಪ್ರಧಾನಿಯವರು ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಕಳೆದರು. 2019 ರಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೈನಿಕರನ್ನು ಭೇಟಿ ಮಾಡಿದರು.

2020ರಲ್ಲಿ, ಪ್ರಧಾನ ಮಂತ್ರಿಗಳು ರಾಜಸ್ಥಾನದ ಜೈಸಲ್ಮೇರ್‌ನ ಲೋಂಗೆವಾಲಾದಲ್ಲಿದ್ದರು. 2021 ರಲ್ಲಿ, ಪ್ರಧಾನ ಮಂತ್ರಿಗಳು ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. 2022 ರಲ್ಲಿ, ಪ್ರಧಾನ ಮಂತ್ರಿ ಮೋದಿ ಹುತಾತ್ಮರಿಗೆ ಗೌರವ ಸಲ್ಲಿಸಲು ಕಾರ್ಗಿಲ್‌ಗೆ ಭೇಟಿ ನೀಡಿದರು. 2023 ಮತ್ತು 2024 ರಲ್ಲಿ, ಅವರು ಹಿಮಾಚಲ ಪ್ರದೇಶದ ಲೆಪ್ಚಾ ಮತ್ತು ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.

Share This Article