ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲಿಯೂ ದೀಪಾವಳಿ ಆಚರಣೆ ಬಲು ಜೋರು!

Public TV
3 Min Read

ಭಾರತದಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಜೋರಾಗಿದೆ. ಮಾರುಕಟ್ಟೆಗಳಲ್ಲಿ ದೀಪಗಳು, ಹಣತೆಗಳು, ಪಟಾಕಿಗಳು ಗಮನ ಸೆಳೆಯುತ್ತಿವೆ. ಜನರು ಕೂಡ ಹಬ್ಬದ ಮೂಡ್‌ನಲ್ಲಿದ್ದಾರೆ. ಆದರೆ ದೀಪಾವಳಿ ಸಂಭ್ರಮ ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಬೇರೆಬೇರೆ ದೇಶಗಳಲ್ಲಿಯೂ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹಾಗಿದ್ರೆ ಯಾವೆಲ್ಲಾ ದೇಶಗಳು ದೀಪಾವಳಿ ಆಚರಿಸುತ್ತದೆ ಎಂದು ತಿಳಿಯಲು ಮುಂದೆ ಓದಿ.

ಅಮೆರಿಕ:
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ದೀಪಾವಳಿ ದಿನವನ್ನು ರಾಜ್ಯದಲ್ಲಿ ಅಧಿಕೃತ ರಜಾದಿನವನ್ನಾಗಿ ಘೋಷಿಸಲಾಗಿದೆ. ಈ ರಾಜ್ಯದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ರಜಾದಿನವನ್ನಾಗಿ ಘೋಷಿಸಲು ಸ್ಥಳಿಯಾಡಳಿತ ನಿರ್ಧರಿಸಿದೆ. ಈ ಮೂಲಕ ದೀಪಾವಳಿಗೆ ಸಾರ್ವಜನಿಕ ರಜೆ ಘೋಷಿಸಿದ ಮೂರನೇ ರಾಜ್ಯ ಇದಾಗಿದೆ. ದೀಪಾವಳಿ ಸಮಯದಲ್ಲಿ ಅಮೆರಿಕದ ಹಿಂದೂ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ ಅನಿವಾಸಿ ಭಾರತೀಯರು ಸೇರಿದಂತೆ ಅನೇಕರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಲ್ಲದೇ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ.

ನೇಪಾಳ:
ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು ತಿಹಾರ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇದು ದೀಪಾವಳಿಯನ್ನೇ ಹೋಲುವ ಹಬ್ಬವಾಗಿದೆ. ಇದನ್ನು 5 ದಿನಗಳ ಕಾಲ ಆಚರಿಸಲಾಗುತ್ತದೆ. ವಿವಿಧ ದೇವತೆಗಳು ಮತ್ತು ಸದ್ಗುಣಗಳನ್ನು ಪ್ರತಿನಿಧಿಸುವ ಕಾಗೆಗಳು, ನಾಯಿಗಳು ಮತ್ತು ಹಸುಗಳಂತಹ ಪ್ರಾಣಿ ಈ ಹಬ್ಬದ ಸಮಯದಲ್ಲಿ ಗೌರವಿಸಲಾಗುತ್ತದೆ. ತಿಹಾರ್‌ನ ಕೊನೆಯ ದಿನ ಸಹೋದರ ಸಹೋದರಿಯರಿಗೆ ಮೀಸಲಿಡುವ ಭಾಯಿ ಧೂಜ್ ಹಬ್ಬವನ್ನೂ ಆಚರಿಸಲಾಗುತ್ತದೆ.

ಶ್ರೀಲಂಕಾ:
ಶ್ರೀಲಂಕಾದಲ್ಲಿ ತಮಿಳರು ದೀಪಾವಳಿ ಹಬ್ಬ ಆಚರಿಸುತ್ತಾರೆ. ಇಲ್ಲಿ ದೀಪಾವಳಿಯು ರಾವಣನ ಮೇಲೆ ರಾಮನ ವಿಜಯವನ್ನು ಸೂಚಿಸುತ್ತದೆ. ರಾಮಾಯಣದಲ್ಲಿ ಶ್ರೀಲಂಕಾವನ್ನು ರಾವಣನ ರಾಜ್ಯವೆಂದು ನಂಬಿರುವುದರಿಂದ, ದುಷ್ಟರ ಮೇಲೆ ಒಳ್ಳೆಯದ ವಿಜಯದ ಆಚರಣೆಯಾಗಿ ದೀಪಾವಳಿಯು ಇಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.

ಮಲೇಷ್ಯಾ:
ಮಲೇಷ್ಯಾದಲ್ಲಿ ದೀಪಾವಳಿಯನ್ನು ಹರಿ ದೀವಾಳಿ ಎಂದು ಕರೆಯಲಾಗುತ್ತದೆ. ಇಲ್ಲಿರುವ ಭಾರತೀಯರ ವಲಸಿಗರು ದೀಪ ಬೆಳಗುವ ಮೂಲಕ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುತ್ತದೆ. ಅಲ್ಲಿ ವಿಶೇಷ ಅಡುಗೆಗಳನ್ನು ಮಾಡಿ ಸ್ನೇಹಿತರು, ಕುಟುಂಬಸ್ಥರು ಹಂಚಿ ತಿನ್ನುತ್ತಾರೆ.

ಮಾರಿಷಸ್:
ಮಾರಿಷಸ್‌ನಲ್ಲಿ ಭಾರತೀಯ ಮೂಲದ ಹಲವರು ಇರುವ ಕಾರಣ ಇಲ್ಲಿ ಭಾರತದ ರೀತಿಯಲ್ಲೇ ದೀಪಾವಳಿ ಆಚರಿಸಲಾಗುತ್ತದೆ. ಈ ದೇಶದಲ್ಲಿ ಕೂಡ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುವುದು, ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಮಾಡಲಾಗುತ್ತದೆ.

ಸಿಂಗಾಪುರ:
ಸಿಂಗಾಪುರದಲ್ಲೂ ದೀಪಾವಳಿ ಸಂಭ್ರಮ ಜೋರಿರುತ್ತದೆ. ಇಲ್ಲಿನ ಬೀದಿಗಳು ವಿಶಿಷ್ಟ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಜನರು ಪ್ರಾರ್ಥನೆ ಸಲ್ಲಿಸಲು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸರ್ಕಾರವು ದೀಪಾವಳಿಯನ್ನು ರಜಾದಿನ ಎಂದು ಗುರುತಿಸುತ್ತದೆ.

ಫಿಜಿ:
ಫಿಜಿ ದೇಶದಲ್ಲೂ ಕೂಡ ಭಾರತೀಯರು ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಅನೇಕ ಫಿಜಿಗಳು ಭಾರತೀಯ ಮೂಲದವರಾಗಿರುವ ಕಾರಣ ದೀಪ ಹಚ್ಚುವುದು, ಪಟಾಕಿ ಹೊಡೆಸುವುದು ಮುಂತಾದ ಆಚರಣೆಯ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಟ್ರಿನಿಡಾಡ್ ಮತ್ತು ಟೊಬಾಗೊ:
ವೆನೆಜುವೆಲಾ ಬಳಿ ಕೆರೆಬಿಯನ್ ದ್ವೀಪರಾಷ್ಟ್ರಗಳಾದ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ದೀಪಾವಳಿಯು ಒಂದು ಪ್ರಮುಖ ಸಾಂಸ್ಕೃತಿಕ ಹಬ್ಬವಾಗಿದೆ. ಅಲ್ಲಿ ಕೂಡ ಬಹುತೇಕರು ಭಾರತೀಯ ಮೂಲದವರು ವಾಸಿಸುತ್ತಿದ್ದಾರೆ. ಇಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ಬಣ್ಣ ಬಣ್ಣದ ದೀಪಗಳನ್ನು ಬೆಳಗುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಟಾಕಿ ಸಿಡಿಸುವುದು ಮಾಡುತ್ತಾರೆ.

ಗಯಾನಾ:
ದಕ್ಷಿಣ ಅಮೆರಿಕ ಪ್ರಾಂತ್ಯಕ್ಕೆ ಸೇರುವ ಗಯಾನಾದಲ್ಲೂ ದೀಪಾವಳಿ ಹಬ್ಬದ ಆಚರಣೆ ಬಲು ಜೋರಿದೆ. ಇಲ್ಲಿ ಇಂಡೋ-ಗಯಾನೀಸ್ ಸಮುದಾಯದಿಂದ ದೀಪಾವಳಿಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಇಲ್ಲಿ ಭಾರತೀಯ ಸಂಪ್ರದಾಯವನ್ನು ಸ್ಥಳೀಯ ಪದ್ಧತಿಗಳೊಂದಿಗೆ ಸಂಯೋಜಿಸಲಾಗುತ್ತದೆ.

ದಕ್ಷಿಣ ಆಫ್ರಿಕಾ:
ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಬಹುದೊಡ್ಡ ಸಮುದಾಯವಿದೆ. ವಿಶೇಷವಾಗಿ ಇಲ್ಲಿನ ಡರ್ಬನ್‌ನಲ್ಲಿ ದೀಪಾವಳಿಯನ್ನು ದೀಪಗಳನ್ನು ಬೆಳಗಿಸುವ ಮೂಲಕ, ಪಟಾಕಿಗಳನ್ನು ಸಿಡಿಸುವ ಮೂಲಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸುತ್ತಾರೆ.

Share This Article