ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಶಾಸಕ ಮುನಿರತ್ನ (Munirathna) ಮತ್ತು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ (Kusuma) ನಡುವಿನ ಫೈಟ್ ತಾರಕಕ್ಕೆ ಏರಿದೆ. ಕ್ಷೇತ್ರದ ಜನರಿಗೆ ದೀಪಾವಳಿ (Deepavali) ಪಟಾಕಿ ಹಂಚಲು ಮುಂದಾಗಿದ್ದ ಮುನಿರತ್ನ ಅವರಿಗೆ ಪೊಲೀಸರು ತಡೆ ಒಡ್ಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮುನಿರತ್ನ, ಪಟಾಕಿ ಇಟ್ಟಿದ್ದಾರೆ ಅಂತ ಪೊಲೀಸರಿಗೆ ಕುಸುಮ ಕಡೆಯವರು ದೂರು ಕೊಟ್ಟಿದ್ದಾರೆ. ಪೊಲೀಸರು ಬನ್ನಿ ಸಾರ್ ಕಚೇರಿ ಬೀಗ ತಗೀರಿ ಅಂತ ಕೇಳಿಕೊಂಡಿದ್ದಾರೆ. ಪ್ರತಿ ವರ್ಷ ಪಟಾಕಿಯನ್ನು ಹಂಚಲಾಗುತ್ತಿದೆ. ನಾನೊಬ್ಬನೇ ಅಲ್ಲ ಹಲವು ಮಂದಿ ಪಟಾಕಿಯನ್ನು ಹಂಚುತ್ತಾರೆ. ಎಲ್ಲಿಯೂ ಇಲ್ಲದ ನಿಯಮ ನನಗೆ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರತೀ ವರ್ಷ ನೋಟ್ ಬುಕ್, ಸಂಕ್ರಾಂತಿ ಕಿಟ್ ಕೊಡೋದು, ಗಣೇಶ ಹಬ್ಬಮಾಡೋದು ಮಾಡುತ್ತೇವೆ. ಗಾರ್ಮೆಂಟ್ಸ್, ಮದುವೆ ಛತ್ರದಲ್ಲಿ ಕೆಲಸ ಮಾಡುವವರು ಪಟಾಕಿ ಕೇಳಿದ್ದರು. ಪ್ರತೀ ವರ್ಷ ಪಟಾಕಿ ಕೊಡುತ್ತೇವೆ. ಆದರೆ ಈ ವರ್ಷ ಪಟಾಕಿ ಕೊಡದಂತೆ ಪೊಲೀಸರ ದಂಡೇ ಬಂದಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸುವರು ಯಾರು ಎಂದರೆ ಅದು ಲಕ್ಷ್ಮಿದೇವಿ ವಾರ್ಡ್ ಸದಸ್ಯರು. ಇಲ್ಲಿ ಗ್ರಾಮ ದೇವರ ಹಬ್ಬ, ಗಣಪತಿ ಹಬ್ಬವನ್ನು ಆಚರಿಸಬೇಕಾದರೂ ನ್ಯಾಯಾಲಯದಿಂದ ಅನುಮತಿ ತರಬೇಕು ಎಂದು ಬೇಸರ ವ್ಯಕ್ತಪಡಿಸಿದ್ದರು.
ಇಲ್ಲಿ ಯಾರದರೂ ಪ್ರಶ್ನೆ ಮಾಡಿದರೆ ಅವರ ವಿರುದ್ಧ ದಲಿತ ದೌರ್ಜನ್ಯ ಕೇಸ್ ಹಾಕಲಾಗುತ್ತದೆ. ನಮ್ಮ 43 ಒಕ್ಕಲಿಗ ಹುಡುಗರ ವಿರುದ್ಧ ದಲಿತ ದೌರ್ಜನ್ಯ ಕೇಸ್ ಹಾಕಿದ್ದಾರೆ. ಜೆಪಿ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಪರಾಜಿತ ಅಭ್ಯರ್ಥಿ ಕುಸುಮಾ ಅವರನ್ನು ಕರೆದುಕೊಂಡು ಹೋಗಿದ್ದಾರೆ. ನನಗೆ ಮುನಿರತ್ನ ಕಥೆ ಬೇಡ. ಕ್ಷೇತ್ರದಲ್ಲಿ ಸಮಸ್ಯೆ ಇದ್ರೆ ಕುಸುಮಾಗೆ ಹೇಳಿ ಎಂದರು. ಈಗಲೂ ಅದೇ ಸಮಸ್ಯೆ ಎಂದು ಸಿಟ್ಟು ಹೊರಹಾಕಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಳೆಯರು ಅವರು, ಕೋವಿಡ್ ಸಮಯದಲ್ಲಿ ನಮಗೆ ಸಹಾಯ ಇವರೇ ಸಹಾಯ ಮಾಡಿದ್ದಾರೆ. ನಮಗೆ ಯಾರು ಸಹೋದರರು ಇಲ್ಲ. ಇವರೇ ನಮಗೆ ಬಾಗಿನ ಕೊಡುತ್ತಾರೆ. ಒಂದು ಹಬ್ಬವನ್ನು ಆಚರಿಸಲು ನಮಗೆ ನೀವು ಬಿಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.