ನನ್ನ ಮರ್ಯಾದೆ ಉಳಿಸಿಕೊಳ್ಳಲು ಕೆಲವು ಬೆದರಿಕೆ ಕರೆ ವಿಡಿಯೋ ರಿಲೀಸ್ ಮಾಡಿಲ್ಲ: ಪ್ರಿಯಾಂಕ್ ಖರ್ಗೆ

Public TV
2 Min Read

ಬೆಂಗಳೂರು: 20 ಬೆದರಿಕೆ ಕರೆಗಳ ವಿಡಿಯೋ ನನ್ನ ಬಳಿ ಇವೆ. ಅದರಲ್ಲಿ ಕೆಲವು ಆಡಿಯೋ ಬಹಳ ಹೇಸಿಗೆಯಾಗಿವೆ. ನನ್ನ ಮರ್ಯಾದೆ ಉಳಿಸಿಕೊಳ್ಳಲು ಬೆದರಿಕೆ ಕರೆ ವಿಡಿಯೋ ರಿಲೀಸ್ ಮಾಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬೆದರಿಕೆ ಕರೆ ಬಗ್ಗೆ ಪ್ರಸ್ತಾಪ ಮಾಡಿದ್ದೆ ಆಗ ಬಿಜೆಪಿಯವರು (BJP) ಏನು ಹೇಳಿದರು? ಇದು ಆರ್‌ಎಸ್‌ಎಸ್ (RSS) ಸಂಸ್ಕೃತಿ ಅಲ್ಲ ಇದು ಪ್ರಿಯಾಂಕ್ ಖರ್ಗೆಯವರ ಪಬ್ಲಿಸಿಟಿ ಸ್ಟಂಟ್ ಅಂತ ಹೇಳಿದರು. ನಿನ್ನೆ ಬೆದರಿಕೆ ಕರೆ ಮಾಡಿದವನು ಆರ್‌ಎಸ್‌ಎಸ್ ನಿಂದ ಬಂದಿದ್ದೇನೆ ಅದರ ಸಂಸ್ಕೃತಿ ಅಳವಡಿಸಿಕೊಂಡಿದ್ದೇನೆ ಎಂದಿದ್ದಾನೆ. ನೀವೇ ನೋಡಿದ್ದೀರಾ, ಬಿಜೆಪಿಯವರು ಆರ್‌ಎಸ್‌ಎಸ್ ಅವರ ಶಾಖೆಯಲ್ಲಿ ಏನು ಕಲಿಸ್ತಾರೆ ಎಂಬುದರ ಉದಾಹರಣೆ ಇದು. ನೀವೇ ತೀರ್ಮಾನ ತೆಗೆದುಕೊಳ್ಳಿ. ಬಹಳ ದೊಡ್ಡ ದೊಡ್ಡ ಮಾತನಾಡುತ್ತಿದ್ದರಲ್ಲ ಬಿಜೆಪಿಯವರೆಲ್ಲ. ಆರ್ ಅಶೋಕ್ ಮಾತನಾಡುತ್ತಿದ್ದರಲ್ಲ 2 ರೂಪಾಯಿ ಬೆಲೆ ಇಲ್ಲ ಈ ಕಾಲ್ ಗೆ ಅಂತ ಇದನ್ನ ತೋರಿಸಿ ಉತ್ತರ ಕೇಳಿ ಎಂದರು. ಇದನ್ನೂ ಓದಿ: RSS ಸಂಸ್ಕೃತಿ ತೋರಿಸುವ 20 ವಿಡಿಯೋ ರಿಲೀಸ್ ಮಾಡಿದ್ದೇನೆ: ಪ್ರಿಯಾಂಕ್ ಖರ್ಗೆ ಬಾಂಬ್

ಆರ್‌ಎಸ್ಎಸ್ ಏನು ಎಂಬುದಕ್ಕೆ ಉತ್ತರ ನಾನು ಕೊಡಬೇಕಾ? ಉತ್ತರ ಇಲ್ಲಿಯೇ ಸಿಕ್ಕಿದೆಯಲ್ಲ ಹಾಲಿ ಸಂಸದರು ಮಾಜಿ ಸಂಸದರು ಏನೆಲ್ಲಾ ಮಾತನಾಡಿದ್ದಾರೆ ಅದಕ್ಕೆ ಕ್ಷಮೆ ಕೇಳುತ್ತಾರಾ ನನಗೆ? ಅಥವಾ ಇನ್ನಷ್ಟು ಬೆದರಿಕೆ ಕರೆ ಜಾಸ್ತಿ ಮಾಡುತ್ತಾರಾ? ನನ್ನ ಫೋನನ್ನು ಸ್ವಿಚ್ ಆಫ್ ಮಾಡಿದ್ದೇನೆ ಅಂತೇಳಿದ್ರು. ಇವತ್ತು ಹಾಕಿರುವ ವಿಡಿಯೋ ಕೇವಲ ಸ್ಯಾಂಪಲ್, ಇದಕ್ಕಿಂತ ಅವಾಚ್ಯವಾಗಿ ಬೈದಿರುವ ವಿಡಿಯೋಗಳಿದೆ. ನನಗೆ ಹೇಸಿಗೆ ಬರುತ್ತದೆ ನನ್ನ ಮರ್ಯಾದೆ ಉಳಿಸಿಕೊಳ್ಳಲು ನಾನು ಎಲ್ಲವನ್ನು ಹಾಕಿಲ್ಲ. ನಾನು ಕೂಡ ಐಟಿಬಿಟಿ ಸಚಿವ ನಮಗೂ ತಂತ್ರಜ್ಞಾನ ಇಲ್ವಾ? ಎಲ್ಲಿಂದ ಕರೆ ಬರುತ್ತಿದೆ ನನಗೂ ಗೊತ್ತಿದೆ. ದೂರು ಕೊಡುವ ಬಗ್ಗೆ ಚರ್ಚೆ ಮಾಡ್ತೀನಿ, ಗೃಹ ಸಚಿವರ ಜೊತೆಯೂ ಚರ್ಚೆ ಮಾಡ್ತೀನಿ ಎಂದಿದ್ದಾರೆ.

ಫೋನ್ ಮಾಡಿದವನ ಮೇಲೆ ಕಿರುಕುಳ ಆಗುತ್ತದೆ ಅಷ್ಟೇ. ಅವನಲ್ಲಿ ಆಲೋಚನೆ ಹಾಕಿದ್ದಾರಲ್ಲ ಆ ವ್ಯಕ್ತಿಗಳು ಆರಾಮಾಗಿ ಓಡಾಡುತ್ತಾರೆ. ಮೂರು ನಂಬರ್ ಅಲ್ಲ ನೂರು ನಂಬರ್ ಮೇಲೂ ಕಂಪ್ಲೇಂಟ್ ಕೊಡಬಹುದು. ಆದರೆ ಆ ನೂರು ವ್ಯಕ್ತಿಗಳನ್ನ ಅಂತ ನೂರು ವ್ಯಕ್ತಿಗಳ ಮನಸ್ಸು ಬುದ್ದಿಯನ್ನು ಕಲುಷಿತ ಮಾಡಿದವರು ಹಾಗೆ ಓಡಾಡ್ತಾರಲ್ಲ. ನಾನು ಬಹಳ ಸ್ಪಷ್ಟವಾಗಿ ಹೇಳಲಿಕ್ಕೆ ಬಯಸುತ್ತೇನೆ. ನನ್ನ ಹೋರಾಟ ವ್ಯಕ್ತಿಗಳ ಮೇಲೆ ವೈಯಕ್ತಿಕ ಹೋರಾಟ ಅಲ್ಲ. ನನ್ನ ಹೋರಾಟ ಆರ್‌ಎಸ್ಎಸ್ ತತ್ವ ಸಿದ್ಧಾಂತದ ವಿರುದ್ಧ ನಾನಿದ್ದೇನೆ. ಆರ್‌ಎಸ್ಎಸ್ ದಾಖಲೆ ತೋರಿಸಲು ಹಿಂಜರಿಕೆನಾ? ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆ ಹೇಗೆ ಮಾಡುತ್ತಿದ್ದಾರೆ. ಇವರ ನಾಯಕರೇ ವೈಯಕ್ತಿಕ ಟೀಕೆ ಮಾಡಿದರೆ ಅವರ ಕಾರ್ಯಕರ್ತರು ಸುಮ್ಮನೆ ಇರುತ್ತಾರಾ? ಈ ತತ್ವ ಸಿದ್ಧಾಂತ ಗಾಂಧೀಜಿಯವರನ್ನು ಬಿಟ್ಟಿಲ್ಲ ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ. ನಾನು ಅವರ ಕಾಲಿನ ಉಗುರಿನಷ್ಟೂ ಇಲ್ಲ ನನ್ನ ಬಿಡ್ತಾರಾ ಇವರು. ರಾಹುಲ್ ಗಾಂಧಿಯವರು ಈ ತತ್ವದ ವಿರುದ್ಧ ಇದ್ದಾರಲ್ವಾ? ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಈ ತತ್ವದ ವಿರುದ್ಧ ಇದ್ದಾರಲ್ವಾ? ಮೂರು ಜನರ ಬೆಂಬಲ ನನಗಿದೆ ಎಂದಿದ್ದಾರೆ. ಇದನ್ನೂ ಓದಿ: ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ: ನಾರಾ ಲೋಕೇಶ್‌ಗೆ ಡಿಕೆಶಿ ತಿರುಗೇಟು

Share This Article