ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

Public TV
2 Min Read

– ಆರೋಪ ಸಾಬೀತಾದ್ರೆ 10 ವರ್ಷ ಜೈಲು, 2.21 ಕೋಟಿ ದಂಡ
– ರಹಸ್ಯ ದಾಖಲೆಗಳೊಂದಿಗೆ ಚೀನಾ ಅಧಿಕಾರಿಗಳನ್ನ ಭೇಟಿಯಾದ್ರಾ ಆಶ್ಲೇ?

ವಾಷಿಂಗ್ಟನ್‌: ಅಮೆರಿಕ ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನ (US Secret Documents) ಅನಧಿಕೃತವಾಗಿ ತಮ್ಮ ಬಳಿ ಸಂಗ್ರಹಿಸಿದ್ದ ಹಾಗೂ ಕೆಲ ವರ್ಷದ ಹಿಂದೆ ಚೀನಾ ಜೊತೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತದ ಮುಂಬೈ ಮೂಲದ ಅಮೆರಿಕನ್ ವಿಶ್ಲೇಷಕ ಹಾಗೂ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್‌ರನ್ನ (Ashley Tellis) ಬಂಧಿಸಲಾಗಿದೆ.

64 ವರ್ಷದ ಆಶ್ಲೇ ಟೆಲ್ಲಿಸ್ ತಮ್ಮ ವಿಯೆನ್ನಾ, ವರ್ಜೀನಿಯಾದ ಮನೆಯಲ್ಲಿ ವಾಯುಪಡೆಯ ತಂತ್ರಗಳು ಮತ್ತು ವಿಧಾನಗಳಿಗೆ ಸಂಬಂಧಿಸಿದ 1000ಕ್ಕೂ ಹೆಚ್ಚು ಪುಟಗಳಷ್ಟು ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರು. ಈ ಮೂಲಕ 18 USC § 793(e) ನಿಯಮ ಉಲ್ಲಂಘನೆ ಮಾಡಿದ್ದಾರೆ. ಶನಿವಾರ ಅವರನ್ನ ಬಂಧಿಸಿದ್ದು, ಸೋಮವಾರ ಅಧಿಕೃತವಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ ಎಂದು ವರ್ಜೀನಿಯಾದ ಪೂರ್ವ ಜಿಲ್ಲೆಯ ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.

ಮುಂಬೈ ಮೂಲದ ಆಶ್ಲೇ ಈ ಹಿಂದೆ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ. ಬುಷ್ ಅವರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕೆಲಸ ಮಾಡಿದ್ದರು. ವಿದೇಶಾಂಗ ಇಲಾಖೆಗೆ ಗೌರವ ಸಂಭಾವನೆ ರಹಿತ ಸಲಹೆಗಾರರಾಗಿಯೂ ಮತ್ತು ಪೆಂಟಗನ್‌ ಆಫೀಸ್ ಆಫ್ ನೆಟ್ ಅಸೆಸ್‌ಮೆಂಟ್‌ನ ಗುತ್ತಿಗೆದಾರರಾಗಿಯೂ ವೃತ್ತಿ ಜೀವನ ನಡೆಸಿದ್ದಾರೆ. ಭಾರತ ಮತ್ತು ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಮೆರಿಕ ಆಡಳಿತಗಳಿಗೆ ಸಲಹೆ ನೀಡುವಲ್ಲಿ ಟೆಲ್ಲಿಸ್ ಹೆಸರುವಾಸಿಯಾಗಿದ್ದಾರೆ.

ಏನಿದು ರಹಸ್ಯ ದಾಖಲೆ?
ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿದ ಗೌಪ್ಯ ಕಡತಗಳನ್ನ 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳ ಕಟ್ಟಡದಿಂದ ರಹಸ್ಯ ಮಾಹಿತಿ ಸಂಗ್ರಹಿಸಿದ್ದಾರೆ. ದಾಖಲೆಗಳನ್ನ ಮುದ್ರಿಸಿ ಲೆದರ್ ಬ್ರೀಫ್‌ಕೇಸ್‌ನೊಂದಿಗೆ ಒಂದು ಕಟ್ಟಡದಿಂದ ಹೊರಬರುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಕ್ಟೋಬರ್ 11 ರಂದು ಅವರ ನಿವಾಸದಲ್ಲಿ ಶೋಧ ನಡೆಸಿದಾಗ ಹಲವಾರು ರಹಸ್ಯ ಕಡತಗಳು ಪತ್ತೆಯಾಗಿವೆ. ಕಸದ ಬುಟ್ಟಿಯಲ್ಲಿಯೂ ದಾಖಲೆಗಳು ಸಿಕ್ಕಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಬಳಿಕ ಅವರನ್ನ ಬಂಧಿಸಲಾಗಿದೆ.

ಚೀನಾ ಭೇಟಿ ಸಾಧ್ಯತೆ
ಆಶ್ಲೇ ಅಧಿಕೃತ ಕಡತಗಳನ್ನು ಅಪಹರಿಸಿದ ಬಳಿಕ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆಯೇ? ಅವರ ಬಳಿಕ ವರದಿ ಹಂಚಿಕೊಂಡಿದ್ದಾರೆಯೇ ಅನ್ನೋದನ್ನೂ ಅಮೆರಿಕದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಯುಎಸ್‌ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಆರೋಪ ಸಾಬೀತಾದ್ರೆ ಜೈಲೇ ಗತಿ
ಒಂದು ವೇಳೆ ಆಶ್ಲೇ ಅವರ ವಿರುದ್ಧ ಹೊರಿಸಲಾದ ಆರೋಪ ಸಾಬೀತಾದ್ರೆ 10 ವರ್ಷಗಳ ಜೈಲುಶಿಕ್ಷೆ ಹಾಗೂ 2.50 ಲಕ್ಷ ಡಾಲರ್‌ (2.21 ಕೋಟಿ ರೂ.) ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಅವರ ಆಸ್ತಿಯನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಳ್ಳಲಿದೆ.

ಆಶ್ಲೇ ಟೆಲ್ಲಿಸ್ ಯಾರು?
2001 ರಲ್ಲಿ ಅಮೆರಿಕ ಸರ್ಕಾರ ಸೇರಿದ್ದ ಟೆಲ್ಲಿಸ್, ಭಾರತ ಮತ್ತು ದಕ್ಷಿಣ ಏಷ್ಯಾ ಬಗ್ಗೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಆಡಳಿತಗಳಿಗೆ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಜನಿಸಿದ ಟೆಲ್ಲಿಸ್, ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಓದಿದ್ದು, ನಂತರ ಚಿಕಾಗೋ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪಡೆದಿದ್ದಾರೆ. ಅವರು ಚಿಕಾಗೋ ವಿಶ್ವವಿದ್ಯಾಲಯದಿಂದಲೇ ರಾಜಕೀಯ ವಿಜ್ಞಾನದಲ್ಲಿ ಎಂಎ ಪದವಿಯನ್ನೂ ಹೊಂದಿದ್ದಾರೆ. ವರ್ಷಗಳಲ್ಲಿ, ಟೆಲ್ಲಿಸ್ ಅಮೆರಿಕ-ಭಾರತ-ಚೀನಾ ನೀತಿ ವಲಯದಲ್ಲಿ ಗುರುತಿಸಿಕೊಂಡಿದ್ದರು. ವೇದಿಕೆಗಳಲ್ಲಿ ಪರಿಚಿತ ಮುಖವಾಗಿದ್ದ ಅವರು, ವಾಷಿಂಗ್ಟನ್, ನವದೆಹಲಿ ಮತ್ತು ಬೀಜಿಂಗ್‌ನಲ್ಲಿ ಅವರ ಬರಹಗಳನ್ನು ಗೌರವಿಸಲಾಗುತ್ತಿತ್ತು.

Share This Article