ವಿಂಡೀಸ್‌ 2-0 ವೈಟ್‌ವಾಶ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ; ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಗೆಲುವು

Public TV
2 Min Read

ನವದೆಹಲಿ: ಕೆ.ಎಲ್‌ ರಾಹುಲ್‌ (KL Rahul) ಅವರ ಅಮೋಘ ಅರ್ಧಶತಕದೊಂದಿಗೆ ಭಾರತ ವೆಸ್ಟ್‌ ಇಂಡೀಸ್‌ ವಿರುದ್ಧ 2ನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ವಿಶೇಷವೆಂದ್ರೆ 37ನೇ ಟೆಸ್ಟ್‌ ಕ್ಯಾಪ್ಟನ್‌ ಶುಭಮನ್‌ ಗಿಲ್‌ (Shubman Gill) ಅವರ ನಾಯಕತ್ವದಲ್ಲಿ ಭಾರತದ ತಂಡದ (Team India) ಮೊದಲ ಜಯ ಕೂಡ ಇದಾಗಿದೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ವಿಂಡೀಸ್‌ (West Indies) ಭಾರತಕ್ಕೆ ಸುಲಭ ತುತ್ತಾಯಿತು. 58 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಕೊನೆಯ ದಿನದ ಕ್ರೀಸ್‌ ಆರಂಭಿಸಿದ ಭಾರತ ಮತ್ತೆರಡು ವಿಕೆಟ್‌ಗಳನ್ನ ಕಳೆದುಕೊಂಡಿತು. ಆದ್ರೆ ಭಾರತದ ಪರ ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಜಯದ ದಡ ಸೇರಿಸುವಲ್ಲಿ ಯಶಸ್ವಿಯಾದರು. 108 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮತ್ತು 2 ಸಿಕ್ಸರ್‌ನೊಂದಿಗೆ 58 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ನಾಯಕ ರೋಸ್ಟನ್ ಚೇಸ್ 2 ವಿಕೆಟ್‌, ಜೋಮೆಲ್ ವಾರಿಕನ್ ಒಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಏನಾಯ್ತು?
ಮೊದಲ ಇನ್ನಿಂಗ್ಸ್‌ನಲ್ಲಿ ಟಾಸ್‌ ಗೆದ್ದ ಭಾರತ ತಂಡ ಬ್ಯಾಟಿಂಗ್‌ ಆಯ್ದುಕೊಂಡಿತ್ತು. 5 ವಿಕೆಟ್ ಕಳೆದುಕೊಂಡು 518 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ವಿಂಡೀಸ್ ಪ್ರಥಮ ಇನ್ನಿಂಗ್ಸ್ ನಲ್ಲಿ ಕೇವಲ 248 ರನ್ ಗಳನ್ನಷನ್ನೇ ಗಳಿಸಲು ಸಾಧ್ಯವಾಯಿತು. 270 ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ನಾಯಕ ಶುಭಮನ್ ಗಿಲ್ ಅವರು ವಿಂಡೀಸ್‌ಗೆ ಫಾಲೋ ಆನ್ ಹೇರಿದರು.

ವಿಂಡೀಸ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪ್ರತಿಹೋರಾಟ ನೀಡಿ 390 ರನ್ ಗಳಿಸಿತಾದರೂ ಜಯದ ಗುರಿ ಕೇವಲ 120 ರನ್ ಗಳಾಗಿದ್ದರಿಂದ ಭಾರತಕ್ಕೆ ಸುಲಭ ತುತ್ತಾಯಿತು. ಪಂದ್ಯವನ್ನು 4ನೇ ದಿನದೊಳಗೇ ಮುಗಿಸುವ ಉತ್ಸಾಹವನ್ನು ಭಾರತ ಹೊಂದಿತ್ತು. ಆದ್ರೆ ಯಶಸ್ವಿ ಜೈಸ್ವಾಲ್ 8 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ ಬಳಿಕ ನಿಧಾನಗತಿಯ ಬ್ಯಾಟಿಂಗ್‌ಗೆ ಇಳಿಯಿತು.

4ನೇ ದಿನಾಂತ್ಯಕ್ಕೆ 18 ಓವರ್ ಗಳಲ್ಲಿ ಒಂದು ವಿಕೆಟ್‌ಗೆ 63 ರನ್ ಗಳಿಸಿದ್ದ ಭಾರತ ತಂಡ 5ನೇ ದಿನ ಮೊದಲ ಅವಧಿಯಲ್ಲಿ 13 ಓವರ್ ಗಳಲ್ಲಿ ಗೆಲುವಿಗೆ ಅಗತ್ಯವಿದ್ದ ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಕೆಎಲ್ ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ್ದ ಸಾಯಿ ಸುದರ್ಶನ್ 76 ಎಸೆತಗಳಲ್ಲಿ 39 ರನ್ ಗಳಿಸಿದ್ರೆ, ನಾಯಕ ಶುಭಮನ್ ಗಿಲ್ 13 ರನ್‌ ಔಟಾದ್ರೆ, ಧ್ರುವ್ ಜುರೆಲ್‌ 6 ರನ್‌ ಗಳಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್
* ಭಾರತ ಪ್ರಥಮ ಇನ್ನಿಂಗ್ಸ್ 518/5ಡಿ
ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ 248ಕ್ಕೆ ಆಲೌಟ್

* ವೆಸ್ಟ್ ಇಂಡೀಸ್ ದ್ವಿತೀಯ ಇನ್ನಿಂಗ್ಸ್ 390ಕ್ಕೆ ಆಲೌಟ್
ಭಾರತ ದ್ವಿತೀಯ ಇನ್ನಿಂಗ್ಸ್ 124/3

Share This Article