ಟ್ರಂಪ್‌ ಇಲ್ಲದಿದ್ರೆ ಭಾರತ-ಪಾಕ್‌ ಪರಮಾಣು ಸಂಘರ್ಷದಲ್ಲಿ ಯಾರೋಬ್ಬರೂ ಉಳಿಯುತ್ತಿರಲಿಲ್ಲವೇನೋ: ಪಾಕ್‌ ಪಿಎಂ

Public TV
2 Min Read

– ಭಾರತ – ಪಾಕ್‌ ನಡುವಿನ ಪರಮಾಣು ಸಂಘರ್ಷ ತಪ್ಪಿಸಿದ್ದು ಟ್ರಂಪ್‌; ಹೊಗಳಿದ ಷರೀಫ್

ಕೈರೋ: ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷವನ್ನು ಡೊನಾಲ್ಡ್‌ ಟ್ರಂಪ್‌ (Donald Trump) ತಪ್ಪಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ಹೇಳುವ ಮೂಲಕ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರ ಬೆನ್ನುತಟ್ಟಿದ್ದಾರೆ.

ಈಜಿಪ್ಟ್‌ನಲ್ಲಿ (Egypt) ನಡೆದ ಗಾಜಾ ಶಾಂತಿ ಸಮ್ಮೇಳದಲ್ಲಿ ಮಾತನಾಡಿದ ಷರೀಪ್‌, ಭಾರತ-ಪಾಕ್‌ ನಡುವೆ ಪರಮಾಣು ಸಂಘರ್ಷ ತಪ್ಪಿಸಿದ್ದೇ ಟ್ರಂಪ್‌. ಟ್ರಂಪ್‌ ಮಧ್ಯಪ್ರವೇಶ ಮಾಡದೇ ಇದ್ದಿದ್ರೆ ಅದೇನಾಗುತ್ತಿತ್ತು ಅನ್ನೋದನ್ನ ಊಹಿಸಲೂ ಆಗುತ್ತಿರಲಿಲ್ಲ. 2 ಪರಮಾಣು ರಾಷ್ಟ್ರಗಳ ನಡುವಿನ ಯುದ್ಧ ಏನಾಗ್ತಿತ್ತು ಅಂತ ಹೇಳೋಕೆ ಯಾರೂ ಬದುಕುಳಿಯದ ಹಂತಕ್ಕೆ ತಲುಪುತ್ತಿತ್ತೇನೋ ಎಂದು ಕಳವಳ ವ್ಯಕ್ತಪಡಿಸಿದರು.

ಮುಂದುವರಿದು… ಟ್ರಂಪ್ ಶಾಂತಿಯ ರಾಯಭಾರಿ, ಅವರು ನಿಲ್ಲಿಸಿದ 8 ಯುದ್ಧಗಳಲ್ಲಿ ಭಾರತ-ಪಾಕಿಸ್ತಾನ ಯುದ್ಧವೂ ಒಂದು. ಅದಕ್ಕಾಗಿಯೇ ಅವರನ್ನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದೆವು. ನೊಬೆಲ್ ಪ್ರಶಸ್ತಿಗೆ ಅತ್ಯಂತ ಪ್ರಾಮಾಣಿಕ ಮತ್ತು ಅರ್ಹ ಅಭ್ಯರ್ಥಿ ಆಗಿದ್ದರು ಎಂದು ಹೊಗಳಿದರು.

ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮದ ನಂತರ ಟ್ರಂಪ್‌ ನಿರಂತರವಾಗಿ ಭಾರತ‌ – ಪಾಕ್‌ ಯುದ್ಧ ನಿಲ್ಲಸಿದ್ದು ನಾನೇ ಎಂದು ಬೆನ್ನುತ್ತಟ್ಟಿಕೊಳ್ಳುತ್ತಲೇ ಇದ್ದಾರೆ. ಆದ್ರೆ ಇದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇಲ್ಲ ಎಂಬುದನ್ನು ಭಾರತ ಪದೇ ಪದೇ ಸ್ಪಷ್ಟಪಡಿಸುತ್ತಲೇ ಇದೆ.

ಷರೀಫ್‌ ಮುಂದೆಯೇ ಭಾರತ ಹೊಗಳಿದ ಟ್ರಂಪ್‌
ಇದಕ್ಕೂ ಮುನ್ನ ಮಾತನಾಡಿದ ಟ್ರಂಪ್‌, ಭಾರತ ಹಾಗೂ ಪ್ರಧಾನಿ ಮೋದಿ ಅವರನ್ನ ಹೊಗಳಿದ್ರು. ಈಗ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿ ಹೊಂದಿಕೊಳ್ಳುತ್ತವೇ ಅಲ್ಲವೇ ಎಂದೂ ಶಹಬಾಜ್ ಷರೀಫ್ ಕಡೆಗೆ ತಿರುಗಿ ಕೇಳಿದರು. ಇದಕ್ಕೆ ಪಾಕ್‌ ಪ್ರಧಾನಿ ಹೌದು ಎನ್ನುತ್ತಲೇ ಸಕಾರಾತ್ಮಕವಾಗಿ ತಲೆಯಾಡಿಸಿದ್ರು. ಈ ವಿಡಿಯೋ ತುಣುಕುಗಳೀಗ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗ್ತಿವೆ.

ಭಾಷಣದ ವೇಳೆ ಮುಗುಳುನಗೆ ಬೀರಿ ಮಾತನಾಡಿದ ಟ್ರಂಪ್‌, ಭಾರತವು ಒಂದು ಅದ್ಭುತ ದೇಶ, ನನ್ನ ಇಳ್ಳೆಯ ಸ್ನೇಹಿತನ ನೇತೃತ್ವದಲ್ಲಿ ಅದ್ಭುತ ಕೆಲಸಗಳನ್ನ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ ಎಂದರು.

ಪಾಕ್‌ ಮಿಲಿಟರಿ ನಾಯಕತ್ವ ಶ್ಲಾಘನೆ
ಇನ್ನೂ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಗಾಜಾ ಶಾಂತಿ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದ ಟ್ರಂಪ್, ಪಾಕಿಸ್ತಾನದ ಮಿಲಿಟರಿ ನಾಯಕತ್ವವನ್ನು ಶ್ಲಾಘಿಸಿದರು. ಉತ್ತಮ ಸ್ನೇಹಿತರು ಒಟ್ಟಾಗಿ ಕೆಲಸ ಮಾಡುವುದರಿಂದ ಶಾಂತಿ ನೆಲೆಸುತ್ತದೆ ಎಂದು ಭಾರತ-ಪಾಕ್‌ ಒಂದಾಗುವಂತೆ ಪರೋಕ್ಷವಾಗಿ ಹೇಳಿದರು. ಇದೇ ವೇಳೆ ತಮ್ಮ ಹಿಂದೆ ನಿಂತಿದ್ದ ಶಹಬಾಜ್ ಷರೀಫ್ ಅವರನ್ನ ತೋರಿಸುತ್ತಾ, ಇದನ್ನ ಸಾಧ್ಯವಾಗಿಸಲು ಸಹಕರಿಸುತ್ತಾರೆ… ಹೌದಲ್ಲವೇ ಎಂದು ವ್ಯಂಗ್ಯ ಮಾಡಿದರು.

Share This Article