ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು – ರಾಜು ತಾಳಿಕೋಟೆ ನಿಧನಕ್ಕೆ ಶೈನ್ ಶೆಟ್ಟಿ ಕಣ್ಣೀರು

Public TV
1 Min Read

– ತುಂಬಾ ತಮಾಷೆಯ, ಬಹಳ ಪ್ರೀತಿಸುವ ವ್ಯಕ್ತಿ
– ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ

ಉಡುಪಿ: ರಾಜು ತಾಳಿಕೋಟೆ (Raju Talikote) ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ನಿನಗೋಸ್ಕರ ಈ ಚಿತ್ರ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು ಎಂದು ರಾಜು ತಾಳಿಕೋಟೆಯವರ ನಿಧನಕ್ಕೆ ನಟ ಶೈನ್ ಶೆಟ್ಟಿ (Shine Shetty) ಕಣ್ಣೀರಿಟ್ಟಿದ್ದಾರೆ.

ಮಣಿಪಾಲ ಆಸ್ಪತ್ರೆ (Manipal Hospital) ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಗ್ ಬಾಸ್ ಸೀಸನ್ 7ರಲ್ಲಿ ಜೊತೆಗಿದ್ದೆವು. ಇಡೀ ಸೀಸನ್‌ನ ನಟರ ಜೊತೆ ಅನ್ಯೋನ್ಯ ಸಂಬಂಧವಿದೆ. ರಾಜು ತಾಳಿಕೋಟೆ ತುಂಬಾ ತಮಾಷೆಯ, ಬಹಳ ಪ್ರೀತಿಸುವ ವ್ಯಕ್ತಿ. ಸಿನಿಮಾ ನಿರ್ಮಾಣದ ಕಾಲ ಕೂಡಿ ಬಂದಾಗ ರಾಜು ಅವರನ್ನು ಸಂಪರ್ಕ ಮಾಡಿದ್ದೆ. ನಮ್ಮ ಸಿನಿಮಾಗೆ ಮೊದಲು ಆಯ್ಕೆ ಮಾಡಿದ್ದು ರಾಜು ತಾಳಿಕೋಟೆ ಅವರನ್ನು. ಪಾತ್ರ ಮತ್ತು ಡೈಲಾಗ್ ಅವರಿಗಾಗಿಯೇ ಬರೆದಿದ್ದೇವೆ. ರಾಜು ತಾಳಿಕೋಟೆಯವರಿಗೆ ಒಟ್ಟು 40 ದಿನದ ಶೆಡ್ಯೂಲ್ ಫಿಕ್ಸ್ ಆಗಿತ್ತು. ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ. ಉಡುಪಿ, ಮಂಗಳೂರು ಸುತ್ತಾಡಲು, ಮೀನು ತಿನ್ನಲು ಒಂದು ದಿನ ಮೊದಲೇ ಬಂದಿದ್ದರು. ಗೆಳೆಯರ ಜೊತೆ ಬೇರೆ ಬೇರೆ ಜಾಗಕ್ಕೆ ಸುತ್ತಾಡಿದ್ದಾರೆ ಎಂದರು.

ಭಾನುವಾರ ರಾತ್ರಿ 11 ಗಂಟೆಗೆ ತಂಡದ ಜೊತೆ ಮಾತನಾಡಿದ್ದಾರೆ. ಬಳಿಕ 11:59ಕ್ಕೆ ಉಸಿರಾಟ ಸಮಸ್ಯೆ ಅಂತ ಫೋನ್ ಮಾಡಿದ್ದಾರೆ. ಕೂಡಲೇ ಹೆಬ್ರಿ ಹೆಲ್ತ್ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ನೇರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬಂದೆವು. ಕಳೆದ ರಾತ್ರಿಯೇ ಕುಟುಂಬಕ್ಕೆ ಮಾಹಿತಿಯನ್ನು ಕೊಟ್ಟಿದ್ದೇವೆ. ಮಕ್ಕಳು ಕುಟುಂಬಸ್ಥರು ಬಂದಿದ್ದರು. ಬಳಿಕ ಕೊನೆಯುಸಿರೆಳೆದಿದ್ದಾರೆ ಎಂದು ಬೇಸರಿಸಿದರು.

Share This Article