-RSSನ 100 ವರ್ಷದ ಇತಿಹಾಸದಲ್ಲಿ ಭಯೋತ್ಪಾದನೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ
ಬೆಂಗಳೂರು: ಪ್ರಿಯಾಂಕ್ ಖರ್ಗೆಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ, ಅದರ ಅಹಂನಲ್ಲಿ ಮಾತಾಡ್ತಿದ್ದಾರೆ ಎಂದು ಎಂಎಲ್ಸಿ ಸಿ.ಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾನುವಾರ (ಅ.12) ಪ್ರಿಯಾಂಕ್ ಖರ್ಗೆ (Priyank Kharge) ಸಿಎಂಗೆ ಪತ್ರ ಬರೆದು, ಸಂಘದ ಚಟುವಟಿಕೆ ನಿರ್ಬಂಧಕ್ಕೆ ಮುಂದಾಗಿದ್ದಾರೆ. ನಾನು ಪ್ರಿಯಾಂಕ್ ಖರ್ಗೆ ಅವರನ್ನು ಸಾರ್ವಜನಿಕ ಚರ್ಚೆಗೆ ಆಹ್ವಾನ ಕೊಡ್ತೇನೆ. ಅವರಿಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ. ಅದರ ಅಹಂನಲ್ಲಿ ಮಾತಾಡ್ತಿದ್ದಾರೆ. ಸಂಘದ ನೂರು ವರ್ಷದ ಇತಿಹಾಸದಲ್ಲಿ ಭಯೋತ್ಪಾದನೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಆದರೆ ಪ್ರಕೋಪ, ವಿಕೋಪ ಸಮಸ್ಯೆಗಳ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ನೂರಾರು ಉದಾಹರಣೆಗಳಿವೆ. ಆರ್ಎಸ್ಎಸ್ ಪ್ರೇರಣೆ ಪಡೆದು ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ. ಸಮಾಜಕ್ಕೆ ತನ್ನದೇ ಆದ ಸಕಾರಾತ್ಮಕ ಕೊಡುಗೆ ಕೊಡ್ತಿದೆ. ಸಕಾರಾತ್ಮಕ ಕೊಡುಗೆ ಕೊಡ್ತಿರೋ ಸಂಘವನ್ನು ನಕಾರಾತ್ಮಕವಾಗಿ ಬಿಂಬಿಸೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಆರ್ಎಸ್ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ (Congress) ಭ್ರಷ್ಟಾಚಾರದ ಪಕ್ಷ, ಭ್ರಷ್ಟಾಚಾರದ ಪಿತಾಮಹರೇ ಕಾಂಗ್ರೆಸ್ನಲ್ಲಿದ್ದಾರೆ. ಇವರೇ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಕೊಟ್ಟು ಬೆಳೆಸಿದ್ದಾರೆ. ಅಂತಹ ಕಾಂಗ್ರೆಸ್ನಲ್ಲಿರುವ ನೀವು ಸಂಘದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಪಾಕ್ ಪರ ಘೋಷಣೆ, ಗೋಹತ್ಯೆ, ಗೋಭಕ್ಷಣೆಗೆ ಕುಮ್ಮಕ್ಕು ಕೊಡೋರನ್ನು ಬೆಂಬಲಿಸುವ ನೀಚತನ ನಿಮ್ಮ ಪಕ್ಷಕ್ಕಿದೆ. ಗಾಂಧಿಯವರ ಹತ್ಯೆಗೂ ಸಂಘಕ್ಕೂ ಸಂಬಂಧ ಇಲ್ಲ ಅಂತ ನೆಹರೂ ಅವರು ನೇಮಿಸಿದ ಸಮಿತಿಗಳೇ ಹೇಳಿವೆ. ಆದರೂ ಮತ್ತೆ ಗಾಂಧಿ ಹತ್ಯೆ ಮಾಡಿದ್ದು ಆರ್ಎಸ್ಎಸ್ ಅಂತ ಸುಳ್ಳು ಹೇಳ್ತಿದ್ದೀರಿ. ಸರ್ವಾಧಿಕಾರಿ ಮನಸ್ಥಿತಿ ಅಂದಿದ್ದೀರಿ, ತುರ್ತು ಪರಿಸ್ಥಿತಿ ಹೇರಿದ ಇತಿಹಾಸ ನಿಮ್ಮ ಪಕ್ಷಕ್ಕಿದೆ. ಸರ್ವಾಧಿಕಾರಿ ಅನ್ನೋದೂ ನಿಮ್ಮ ಪಕ್ಷಕ್ಕೆ ಅನ್ವಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ RSS ಅಜೆಂಡಾ ಇಟ್ಕೊಂಡೇ ನೀವು ಚುನಾವಣೆಗೆ ಬನ್ನಿ. ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬರಲಿ. ನೀವು ಗೆಲ್ತೀರೋ ಇಲ್ಲವೋ ಎಂದು ನೋಡೇಬಿಡೋಣ ಎಂದು ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.
ಇನ್ನೂ ಸಿಎಂ ಅವರಿಂದ ಸಚಿವರಿಗೆ ಡಿನ್ನರ್ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಅವರು ಗುತ್ತಿಗೆದಾರರ ಕಮಿಷನ್ ಆರೋಪ ಮಾಡಿದ್ದಾರೆ, ಅದರ ಬಗ್ಗೆ ಕಳಕಳಿ ವ್ಯಕ್ತಪಡಿಸಬೇಕಿತ್ತು. ಇದು ಅಪಮಾನ ಅಂತ ಹೇಳಬೇಕಿತ್ತು. ಇನ್ನೂ ಸಿಎಂ ಹೆಲಿಕಾಪ್ಟರ್ ಸಮೀಕ್ಷೆ ಮಾಡಿದರು, ಆದರೆ ಕೆಳಗಿಳಿದು ರೈತರ ಕಷ್ಟ ಕೇಳಲಿಲ್ಲ. ಮೇಲಷ್ಟೇ ಹಾರಾಟ ಮಾಡಿ ರೈತರ ಕಷ್ಟ ಕೇಳಲಿಲ್ಲ. ಸಚಿವರ ಔತಣ ಕೂಟ ಜನರು ಸಂಕಷ್ಟದಲ್ಲಿದ್ದಾಗ ಇಟ್ಕೊಳ್ಳೋದಲ್ಲ. ಸಂವೇದನೆ ಇರೋರು ಈ ಔತಣ ಕೂಟ ಇಟ್ಕೊಳ್ಳಲ್ಲ. ಸಿಎಂಗೆ ಸಂವೇದನೆ ಇದೆಯಾ? ಎಂದಿದ್ದಾರೆ.
ಬಿಕೆ ಹರಿಪ್ರಸಾದ್ ಅವರು ಆರ್ಎಸ್ಎಸ್ ನೋಂದಣಿ ಆಗಿಲ್ಲ ಎಂದು ಹೇಳಿದ್ದಾರೆ. ಹೀಗೆಲ್ಲ ಮಾತಾಡಿದರೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆ, ಅಧಿಕಾರ ಪಡೆದುಕೊಳ್ಳಲು ಹರಿಪ್ರಸಾದ್ ಹೀಗೆ ಮಾತಾಡಿದ್ದಾರೆ. ಇನ್ನೂ ದೇಶಪಾಂಡೆ ಅವರು ಹಿರಿಯರು, ಅವರು ಹೇಳಿದ್ದು ಸರಿ ಇದೆ. ನಾವು ಹೇಳಿದರೆ ಟೀಕೆ, ರಾಜಕೀಯ ಅಂತಾರೆ. ಆದರೆ ಅವರ ಪಕ್ಷದ ದೇಶಪಾಂಡೆ ಅವರೇ ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ನಾನು ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ