– ತಾನು ರೇಪ್ ಮಾಡಿ, ಬಳಿಕ ಸ್ನೇಹಿತನ ಕರೆತಂದು ಕೃತ್ಯ ಎಸಗಿದ್ದ ಆರೋಪಿಗಳು
ಚಿಕ್ಕಬಳ್ಳಾಪುರ: ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿಗೆ (Manchenahalli) ಹೋಗುವ ಮಾರ್ಗದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ಮೂಲದ ಸಿಕಂದರ್ ಬಾಬಾ ಹಾಗೂ ಜನಾರ್ಧನಾಚಾರಿ ಎಂದು ಗುರುತಿಸಲಾಗಿದ್ದು, ಸದ್ಯ ಸಂತ್ರಸ್ತ ಯುವತಿಗೆ ಮಹಿಳಾ ಸ್ವಾದಾರ ಕೇಂದ್ರದಲ್ಲಿ ಆರೈಕೆ ನೀಡಲಾಗುತ್ತಿದೆ.ಇದನ್ನೂ ಓದಿ: ಚಿಕ್ಕಮಗಳೂರು | 5 ತಿಂಗಳ ಹಿಂದಷ್ಟೇ ಮದುವೆ – ಜಗಳವಾಡಿ ತವರು ಸೇರಿದ್ದ ಪತ್ನಿಯನ್ನು ಇರಿದು ಕೊಂದ ಪತಿ
ಘಟನೆ ನಡೆದ ದಿನ ಸಂತ್ರಸ್ತ ಯುವತಿ ಕೆಲಸ ಹುಡುಕಿಕೊಂಡು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ್ದರು. ಬಳಿಕ ವಾಪಸ್ ನಡೆದುಕೊಂಡು ಮಂಚೇನಹಳ್ಳಿಗೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಆರೋಪಿ ಸಿಕಂದರ್ ಬಂದು, ಡ್ರಾಪ್ ಕೊಡುವ ನೆಪದಲ್ಲಿ ಯುವತಿಯನ್ನು ಪುಸಲಾಯಿಸಿ ಬೈಕ್ ಹತ್ತಿಸಿಕೊಂಡಿದ್ದ. ಬಳಿಕ ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಆನಂತರ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ತನ್ನ ಸ್ನೇಹಿತ ಜನಾರ್ಧನ್ ಅನ್ನು ಅದೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಕೃತ್ಯದ ಬಳಿಕ ಆಕೆಯ ಕಿವಿಯಲ್ಲಿದ್ದ ಬಂಗಾರದ ಓಲೆ ಕಸಿದುಕೊಂಡು ಮಾರಾಟ ಮಾಡಿದ್ದಾರೆ. ಸಂತ್ರಸ್ತ ಯುವತಿಯನ್ನು ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗಿದ್ದಾರೆ. ಬಳಿಕ ಗಾಬರಿಯಿಂದ ಕೂತಿದ್ದ ಯುವತಿಯನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಸದ್ಯ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನನ್ವಯ ತನಿಖೆಗಿಳಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬೆಂಗ್ಳೂರಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ