ಉಗ್ರರ ಒಳನುಸುಳುವಿಕೆ ತಡೆಯಲು ಬಿಎಸ್‌ಎಫ್ ಕಟ್ಟೆಚ್ಚರ; ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಳ

Public TV
2 Min Read

– ಎಲ್‌ಒಸಿಯಲ್ಲಿ ಭಯೋತ್ಪಾದಕರ ಲಾಂಚ್‌ ಪ್ಯಾಡ್‌ಗಳು ಸಕ್ರಿಯ; ಗುಪ್ತಚರ ವರದಿ

ಶ್ರೀನಗರ: ಚಳಿಗಾಲದ ಸಮಯದಲ್ಲಿ ಉಗ್ರರ ಒಳನುಸುಳುವಿಕೆ ತಡೆಯುವ ಸಲುವಾಗಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಎಲ್‌ಒಸಿಯಲ್ಲಿ (LoC ಗಡಿ ನಿಯಂತ್ರಣ ರೇಖೆ) ಉಗ್ರ ಲಾಂಚ್‌ಪ್ಯಾಡ್‌ಗಳು ಸಕ್ರಿಯಗೊಂಡಿರುವ ಹಿನ್ನೆಲೆ ಗಡಿಯುದ್ದಕ್ಕೂ BSF (ಗಡಿ ಭದ್ರತಾ ಪಡೆ) ಕಟ್ಟೆಚ್ಚರ ವಹಿಸಿದೆ.

ಹೌದು. ಗುಪ್ತಚರ ವರದಿಗಳ ಪ್ರಕಾರ, ಎಲ್‌ಒಸಿ ಗಡಿಯುದ್ಧಕ್ಕೂ ಹಲವಾರು ಲಾಂಚ್‌ ಪ್ಯಾಡ್‌ಗಳಲ್ಲಿ ಭಯೋತ್ಪಾದಕರು (Terrorists) ಕಣಿವೆಯೊಳಗೆ ನುಸುಳಲು ಕಾಯುತ್ತಿದ್ದಾರೆ. ಚಳಿಗಾಲದ ಸಂದರ್ಭದಲ್ಲಿ ಇದು ನಡೆಯುತ್ತಿರುತ್ತದೆ. ಹಾಗಾಗಿ ಚಳಿಗಾಲಕ್ಕೂ ಮುನ್ನವೇ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬಿಎಸ್‌ಎಫ್‌ ಮೂಲಗಳು ತಿಳಿಸಿವೆ.

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದ ʻವುಲರ್ 2.0ʼ ಮ್ಯಾರಥಾನ್ ವೇಳೆ ಈ ಕುರಿತು ಬಿಎಸ್‌ಎಫ್ ಹೆಚ್ಚುವರಿ ಮಹಾನಿರ್ದೇಶಕ (ADG) ಸತೀಶ್ ಎಸ್. ಖಂಡ್ರೆ ಮಾತನಾಡಿದರು.

ಚಳಿಗಾಲ ಶುರುವಾಗುತ್ತಿದ್ದಂತೆ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಹಾಗಾಗಿ ಗಡಿಯಲ್ಲಿ ಕಣ್ಗಾವಲು ಬಲಪಡಿಸಿದ್ದೇವೆ. ನಮ್ಮ ಸೈನಿಕರು, ಅಧಿಕಾರಿಗಳನ್ನ ಅಲರ್ಟ್‌ ಮಾಡಿದ್ದೇವೆ. ಗುಪ್ತಚರ ಮಾಹಿತಿಯ ಪ್ರಕಾರ, ಈಗಾಗಲೇ ಗಡಿಯಲ್ಲಿ ಹಲವಾರು ಭಯೋತ್ಪಾದಕ ಲಾಂಚ್‌ ಪ್ಯಾಡ್‌ಗಳನ್ನ ಸಕ್ರಿಯಗೊಳಿಸಿದೆ. ಅಲ್ಲಿಂದ ಭಯೋತ್ಪಾದಕರು ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ. ಸದ್ಯಕ್ಕೆ ಎಷ್ಟು ಉಗ್ರರು ಇದ್ದಾರೆ ಅನ್ನೋದು ಅಂದಾಜು ಮಾಡುವುದು ಕಷ್ಟ. ಆದ್ರೆ ಕೆಲ ಚಟುವಟಿಕೆಗಳು ಸಕ್ರಿಯಗೊಂಡಿರುವ ಬಗ್ಗೆ ವರದಿ ಬಂದಿದೆ. ಹಾಗಾಗಿ ನಾವು ಗಡಿಯ ಎಲ್ಲಾ ಭಾಗದಲ್ಲು ಸಕ್ರಿಯವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸೇನೆ, ಬಿಎಸ್‌ಎಫ್‌ ಜಂಟಿ ಕಣ್ಗಾವಲು
ಗುಪ್ತಚರ ವರದಿ ಬೆನ್ನಲ್ಲೇ ಗಡಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಬಿಎಸ್‌ಎಫ್‌ ಹಾಗೂ ಭಾರತೀಯ ಸೇನೆ ಸಂಪೂರ್ಣ ಸಿದ್ಧವಾಗಿದ್ದು, ಜಂಟಿಯಾಗಿ ಕಣ್ಗಾವಲು ನಿಯೋಜಿಸಲಾಗಿದೆ. ನಮ್ಮ ಸೈನಿಕರ ಕಣ್ತಪ್ಪಿಸಿ‌ ಬರಲು ಯಾರಿಂದಲೂ ಸಾಧ್ಯವಿಲ್ಲ ಎಂದಿದೆ ಬಿಎಸ್‌ಎಪ್.

ಚಳಿಗಾಲದಲ್ಲಿ ಏಕೆ ನುಸುಳುವಿಕೆ ಹೆಚ್ಚಳ?
ಚಳಿಗಾಲದಲ್ಲಿ ಹಿಮಪಾತದಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಅನೇಕ ಮಾರ್ಗಗಳು ಮುಚ್ಚಿಕೊಳ್ಳುತ್ತವೆ. ಇದರ ಉಪಯೋಗ ಪಡೆದುಕೊಳ್ಳುವ ಭಯೋತ್ಪಾದಕರು ಒಳಗೆ ನುಸುಳಲು ಯತ್ನಿಸುತ್ತಾರೆ. ಹೀಗಾಗಿ ಬಿಎಸ್‌ಎಫ್‌ ಹಗಲು ಮತ್ತು ರಾತ್ರಿ ಕಣ್ಗಾವಲು ಇರಿಸಿದೆ. ಡ್ರೋನ್‌ಗಳನ್ನು ಸಹ ನಿಯೋಜನೆ ಮಾಡಲಾಗಿದೆ.

Share This Article