ಬಿಹಾರದಲ್ಲಿ ಸೀಟು ಹಂಚಿಕೆ ಇತ್ಯರ್ಥ – ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ

Public TV
2 Min Read

– ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ 29 ಸ್ಥಾನ ಹಂಚಿಕೆ

ಪಾಟ್ನಾ: ಬಿಹಾರ ಚುನಾವಣೆ ಘೋಷಣೆಯಾದ ದಿನದಿಂದಲೂ ಕಾಡುತ್ತಿದ್ದ ಸಮಸ್ಯೆ ಈಗ ಬಗೆಹರಿದಿದೆ. ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಮಿತ್ರ ಪಕ್ಷಗಳಲ್ಲಿ ತಲೆದೋರಿದ್ದ ಸೀಟು ಹಂಚಿಕೆ (Bihar Seat Share) ಕಗ್ಗಂಟು ಕಡೆಗೂ ಇತ್ಯರ್ಥವಾಗಿದೆ. ಅದರಂತೆ ಬಿಜೆಪಿ, ಎನ್‌ಡಿಎ ಪಕ್ಷಗಳು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಚಿರಾಗ್ ಪಾಸ್ವಾನ್ (Chirag Paswan) ಅವರ ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್ ಪಾಸ್ವಾನ್ ಬಣ) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಸೀಟು ಹಂಚಿಕೆ ಪಟ್ಟಿಯನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಬಿಡುಗಡೆ ಮಾಡಿದ್ದಾರೆ. 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಎನ್‌ಡಿಎ ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಯು ತಲಾ 101 ಸೀಟುಗಳಲ್ಲಿ ಸ್ಪರ್ಧಿಸಲಿದ್ದು, ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್ ಪಾಸ್ವಾನ್ ಬಣ) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ರಾಷ್ಟ್ರೀಯ ಲೋಕ ಮೋರ್ಚಾ ಹಾಗೂ ಜಿತನ್ ರಾಮ್ ಮಾಂಝಿಯವರ ಹಿಂದೂಸ್ತಾನ್ ಆವಮ್ ಮೋರ್ಚಾ ಪಕ್ಷಗಳು ತಲಾ 6 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಬಗೆಹರಿದ ದುಗುಡ
ಲೋಕಜನಶಕ್ತಿ ಪಾರ್ಟಿಯ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ 40-45 ಸ್ಥಾನಗಳಿಗೆ ಬೇಡಿಕೆಯಿಡುತ್ತಾ ಬಂದಿದ್ದರು. ಆದ್ರೆ ಬಿಜೆಪಿ 25 ಸ್ಥಾನಗಳನ್ನು ನೀಡಲು ಮಾತ್ರವೇ ಒಪ್ಪಿಕೊಂಡಿತ್ತು. ಈ ನಡುವೆ ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ಅವರ ಜನ್‌ ಸೂರಜ್‌ ಪಕ್ಷ ಪಾಸ್ವಾನ್‌ ಅವರನ್ನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿತ್ತು. ಸೀಟು ಹಂಚಿಕೆ ಕುರಿತು ಎಲ್‌ಜೆಪಿ ತನ್ನ ನಿರ್ಧಾರ ಬದಲಾಯಿಸುವಂತೆ ಮನವೊಲಿಸಲು ಧರ್ಮೇಂದ್ರ ಪ್ರಧಾನ್‌ ಹಲವಾರು ಸುತ್ತಿನ ಸಭೆ ನಡೆಸಿದರು. ಕೊನೆಗೆ ಜೆಡಿಯು, ಬಿಜೆಪಿ ಒಮ್ಮತದ ಮೇರೆಗೆ 29 ಸ್ಥಾನಗಳನ್ನ ಹಂಚಿಕೆ ಮಾಡಲಾಯಿತು.

ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ (Nitish Kumar) ನೇತೃತ್ವದ ಎನ್‌ಡಿಎ ಮತ್ತು ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆದಿತ್ತು. ಎನ್‌ಡಿಎ ಜಯಗಳಿಸಿದ ಬಳಿಕ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ 2022 ರಲ್ಲಿ ನಿತೀಶ್‌ ಕುಮಾರ್‌ ಎನ್‌ಡಿಎ ತೊರೆದು ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ ಜೊತೆ ಸೇರಿ ಸರ್ಕಾರ ರಚಿಸಿದ್ದರು. 2024ರಲ್ಲಿ ಮತ್ತೆ ನಿತೀಶ್‌ ಕುಮಾರ್‌ ಮಹಾಘಟಬಂಧನ್ ಜೊತೆಗಿನ ಸಂಬಂಧ ಕಡಿದುಕೊಂಡು ಎನ್‌ಡಿಎ ಜೊತೆಗೆ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದರು.

Share This Article