ದಿಲ್ಲಿಯಲ್ಲಿ ಬೌಲರ್‌ಗಳ ದರ್ಬಾರ್‌ – ಫಾಲೋ ಆನ್‌ ಬಳಿಕ ವಿಂಡೀಸ್‌ ದಿಟ್ಟ ಹೋರಾಟ; ಭಾರತಕ್ಕೆ ಇನ್ನಿಂಗ್ಸ್‌ & 97 ರನ್‌ಗಳ ಮುನ್ನಡೆ

Public TV
3 Min Read

ನವದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ 3ನೇ ದಿನದಾಟ ರೋಚಕವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗಳಿಗೆ ಆಲೌಟ್‌ ಆದ ವಿಂಡೀಸ್‌ ತಂಡ ಫಾಲೋ ಆನ್‌ ಬಳಿಕ ದಿಟ್ಟ ಹೋರಾಟದ ಮೂಲಕ ಭಾರತ ತಂಡಕ್ಕೆ ತಿರುಗೇಟು ನೀಡಿದೆ. ಆದಾಗ್ಯೂ ಭಾರತ 3ನೇ ದಿನದ ಅಂತ್ಯಕ್ಕೆ ಇನ್ನಿಂಗ್ಸ್‌ನೊಂದಿಗೆ 97 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ಶನಿವಾರ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ಶುರು ಮಾಡಿದ್ದ ವಿಂಡೀಸ್‌ ತಂಡ ದಿನದ ಅಂತ್ಯಕ್ಕೆ 43 ಓವರ್‌ಗಳಲ್ಲಿ 140 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತ್ತು. 3ನೇ ದಿನ 248 ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಮೊದಲ ಇನ್ನಿಂಗ್ಸ್‌ ಬಳಿಕ 270 ರನ್‌ಗಳ ಭಾರೀ ಹಿನ್ನಡೆಯಲ್ಲಿದ್ದ ಕಾರಣ ಭಾರತ ಫಾಲೋ ಆನ್‌ ಘೋಷಿಸಿತು. ಹೀಗಾಗಿ ವೆಸ್ಟ್‌ ಇಂಡೀಸ್‌ ತಂಡ 3ನೇ ದಿನವೇ ತನ್ನ 2ನೇ ಇನ್ನಿಂಗ್ಸ್‌ ಶುರು ಮಾಡಿತು.

ಫಾಲೋ ಆನ್​ ಎಂದರೇನು?
ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿ 518 ರನ್​ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್​ ತಂಡ​ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 248 ರನ್​ಗಳಿಗೆ ಆಲೌಟ್​ ಆಯ್ತು. ಇದರೊಂದಿಗೆ 270 ರನ್​ಗಳ ಹಿನ್ನಡೆ ಸಾಧಿಸಿತು. ಟೆಸ್ಟ್​ನಲ್ಲಿ ಯಾವುದೇ ತಂಡವೂ 200 ರನ್​ ಹಿನ್ನಡೆಯೊಂದಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್​ ಕೊನೆಗೊಂಡರೇ ಎದುರಾಳಿ ತಂಡಗಳು ಫಾಲೋ ಆನ್​ ಹೇರಬಹುದು.​ ಆಗ ಫಾಲೋ ಆನ್​ ಪಡೆದ ತಂಡ ಬೆನ್ನಲ್ಲೇ ಎರಡನೇ ಇನ್ನಿಂಗ್ಸ್​ ಬ್ಯಾಟಿಂಗ್ ಆರಂಭಿಸಬೇಕು. 2ನೇ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ರನ್​ಗಳನ್ನು ಪೂರ್ಣಗೊಳಿಸಿ ಅದರ ನಂತರ ಎಷ್ಟು ರನ್ ಕಲೆಹಾಕುತ್ತದೊ ಅದನ್ನು ಟಾರ್ಗೆಟ್​ ಆಗಿ ಪರಿಗಣಿಸಲಾಗುತ್ತದೆ.

ಫಾಲೋ ಆನ್‌ ಬಳಿಕ ಬ್ಯಾಟಿಂಗ್‌ ಶುರು ಮಾಡಿದ ವೆಸ್ಟ್‌ ಇಂಡೀಸ್‌ ತಂಡದ ಕೇವಲ 35 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಆರಂಭಿಕ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯಿ ಹೋಪ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. 208 ಎಸೆತಗಳಲ್ಲಿ 138 ರನ್‌ಗಳ ಅಜೇಯ ಶತಕದ ಜೊತೆಯಾಟ ಆಡುವ ಮೂಲಕ ಭಾರತಕ್ಕೆ ತಿರುಗೇಟು ನೀಡಿದರು. ಇದರಿಂದಾಗಿ ವಿಂಡೀಸ್‌ ತಂಡ 3ನೇ ದಿನದ ಅಂತ್ಯಕ್ಕೆ ಮುರಿಯದ 3ನೇ ವಿಕೆಟ್‌ಗೆ 173 ರನ್‌ ಗಳಿಸಿದೆ. 145 ಎಸೆತಗಳಲ್ಲಿ 87 ರನ್‌ (2 ಸಿಕ್ಸರ್‌, 9 ಬೌಂಡರಿ) ಬಳಿಸಿರುವ ಜಾನ್ ಕ್ಯಾಂಪ್ಬೆಲ್, 103 ಎಸೆತಗಳಲ್ಲಿ 66 ರನ್‌ (2 ಸಿಕ್ಸರ್‌, 8 ಬೌಂಡರಿ) ಸಿಡಿಸಿರುವ ಶಾಯಿ ಹೋಪ್‌ ಕ್ರೀಸ್‌ನಲ್ಲಿದ್ದು, ಸೋಮವಾರ 4ನೇ ದಿನದಾಟ ಆರಂಭಿಸಲಿದ್ದಾರೆ.

ದಿಲ್ಲಿಯಲ್ಲಿ ಬೌಲರ್‌ಗಳ ದರ್ಬಾರ್‌
ಇನ್ನೂ 3ನೇ ದಿನ ಭಾರತೀಯ ಬೌಲರ್‌ಗಳು ಪಾರಮ್ಯ ಮೆರೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್‌ ಯಾದವ್‌ 5 ವಿಕೆಟ್‌ ಗೊಂಚಲು ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್‌, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ತಲಾ ಒಂದು ವಿಕೆಟ್‌ ಕಿತ್ತರು. 2ನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್
ಭಾರತ ಪ್ರಥಮ ಇನ್ನಿಂಗ್ಸ್ 518/5 ಡಿ, ಯಶಸ್ವಿ ಜೈಸ್ವಾಲ್ 175, ಶುಭಮನ್ ಗಿಲ್ 129, ಸಾಯಿ ಸುದರ್ಶನ್ 87
ವಾರಿಕನ್ 98ಕ್ಕೆ 3, ರೋಸ್ಟನ್ ಚೇಸ್ 83ಕ್ಕೆ 1.

ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ 248ಕ್ಕೆ ಆಲೌಟ್, ಅಲಿಖ್ ಅಥನಾಝ್ 41, ಶಾಯಿ ಹೋಪ್ 36, ಚಂದ್ರಪಾಲ್ 34
ಕುಲ್ದೀಪ್ ಯಾದವ್ 82ಕ್ಕೆ 5, ರವೀಂದ್ರ ಜಡೇಜಾ 46ಕ್ಕೆ 3

Share This Article