ಜೈಪುರ್: ಉತ್ತರ ಪ್ರದೇಶದ (Uttar Pradesh) ಉದ್ಯಮಿ ಅಭಿಷೇಕ್ ಗುಪ್ತಾ ಅವರ ಕೊಲೆ ಪ್ರಕರಣದಲ್ಲಿ ಹಿಂದೂ ಮಹಾಸಭಾ (Hindu Mahasabha) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ (Rajasthan) ಭರತ್ಪುರ ಜಿಲ್ಲೆಯ ಆಗ್ರಾ-ಜೈಪುರ ಹೆದ್ದಾರಿಯ ಲೋಧಾ ಬೈಪಾಸ್ ಬಳಿ ಶುಕ್ರವಾರ ತಡರಾತ್ರಿ ಪಾಂಡೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 26 ರಂದು ಅಲಿಗಢ ನಗರದ ಹೊರವಲಯದಲ್ಲಿ ಬಸ್ ಹತ್ತುತ್ತಿದ್ದಾಗ ಅಭಿಷೇಕ್ ಗುಪ್ತಾ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾ ಅವರ ಪತಿ ಅಶೋಕ್ ಪಾಂಡೆ ಮತ್ತು ಶಾರ್ಪ್ ಶೂಟರ್ ಮೊಹಮ್ಮದ್ ಫಜಲ್ ಮತ್ತು ಆಸಿಫ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಪೂಜಾ ದಂಪತಿ ಸೂಚನೆಯ ಮೇರೆಗೆ ಹತ್ಯೆ ಮಾಡಿದ್ದಾಗಿ ಶಾರ್ಪ್ ಶೂಟರ್ಗಳು ತಿಳಿಸಿದ್ದರು. ಈ ಮಾಹಿತಿ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್
ಬಹಳ ಸಮಯದಿಂದ ಉದ್ಯಮಿಗೆ ದಂಪತಿ ಕಿರುಕುಳ ನೀಡುತ್ತಿದ್ದರು. ಅವರ ಜೊತೆ ಹಣಕಾಸಿನ ವಿವಾದದಿಂದ ಪಾಂಡೆ ದಂಪತಿ ಕೊಲೆಗೆ ಸುಪಾರಿ ನೀಡಿದ್ದರು. ಇನ್ನೂ ಶೂಟರ್ಗಳಿಬ್ಬರೂ ಪಾಂಡೆ ದಂಪತಿಗೆ ಪರಿಚಿತರಾದ್ದು, ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜಾ ಪಾಂಡೆ ಬಂಧನಕ್ಕೆ 50,000 ರೂ. ಬಹುಮಾನ ಘೋಷಿಸಲಾಗಿತ್ತು. ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಶಿವಮೊಗ್ಗ ಜೈಲಿಗೆ ಬಿಸ್ಕೆಟ್ ಪ್ಯಾಕ್ನಲ್ಲಿ ಗಾಂಜಾ ಸಾಗಾಟ – ಇಬ್ಬರು ಅರೆಸ್ಟ್