ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

Public TV
1 Min Read

ಬೆಂಗಳೂರು: ಸ್ಥಳೀಯ ಶಾಸಕರಿಗೆ ತಾಳ್ಮೆ ಇಲ್ಲ. ಕಾರ್ಯಕ್ರಮ ಹಾಳು ಮಾಡಲೆಂದೇ ಆಗಮಿಸಿದ್ದರು. ಇಂತವರನ್ನು ಗೆಲ್ಲಿಸಿದ್ದು ನಿಮ್ಮ ತಪ್ಪು. ಮುಂದೆಯಾದರೂ ಸರಿಪಡಿಸಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮುನಿರತ್ನ (Munirathna) ಅವರಿಗೆ ಟಾಂಗ್‌ ನೀಡಿದ್ದಾರೆ.

ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ (JP Park) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೇನು ಸರ್ಕಾರದ ಶಿಲಾನ್ಯಾಸ ಮಾಡುವ ಕಾರ್ಯಕ್ರಮ ಅಲ್ಲ. ಇದು ಜನರ ಸಮಸ್ಯೆ ಆಲಿಸುವ ಕಾರ್ಯಕ್ರಮ. ಎಲ್ಲರಿಗೆ ಏನು ಗೌರವ ಕೊಡಬೇಕು ಅದು ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:  ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ

ಆರ್‌ಎಸ್‌ಎಸ್‌ (RSS) ಸಂಸ್ಥೆಗೆ ಅಗೌರವ ತರುವ ಕೆಲಸ ಮುನಿರತ್ನ ಮಾಡಿದ್ದಾರೆ. ಆರ್‌ಎಸ್‌ಎಸ್‌ಗೆ ಒಂದು ಇತಿಹಾಸ ಇದೆ ಅವರೇನು ಮಾಡಬೇಕು ಮಾಡುತ್ತಿದ್ದಾರೆ. ಅವರ ಹೆಸರನ್ನು ಕೆಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಜಿಬಿಎ ಸಭೆಗೆ ಬಂದಿಲ್ಲ. ಅಲ್ಲಿ ಬಂದು ಸಮಸ್ಯೆ ಹೇಳಿಲ್ಲ. ಇಲ್ಲಿ ಬಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರು ನಾಗರೀಕರ ಜೊತೆ ನಡೆಯಬೇಕು ಎಂದು ಎಲ್ಲರಿಗೂ ಆಹ್ವಾನ ಕೊಟ್ಟಿದ್ದೇನೆ. ಬೆಳಗ್ಗೆಯಿಂದ ಎರಡು ತಾಸು ನಡೆದು ಸಮಸ್ಯೆ ಕೇಳಿದ್ದೇನೆ. ಎಲ್ಲರ ಮಾಹಿತಿ, ಫೋನ್ ನಂಬರ್ ತಗೊಂಡಿದ್ದೇನೆ ಅವರ ಸಮಸ್ಯೆ ಬಗೆಹರಿಸುತ್ತೇನೆ. ಅವರನ್ನು ಸಂಪರ್ಕ ಮಾಡುವ ಕೆಲಸ ಮಾಡುತ್ತೇನೆ. ಉಳಿದ ಜನರು 1533ಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಬಹುದು ಎಂದರು. ಇದನ್ನೂ ಓದಿ:  ರೌಡಿಗಳನ್ನು ಕರೆಸಿ ಹಲ್ಲೆ, ಪೊಲೀಸರಿಂದ ನಾನು ಬದುಕಿದ್ದೇನೆ: ಡಿಕೆಶಿ ವಿರುದ್ಧ ಮುನಿರತ್ನ ಆಕ್ರೋಶ

ಗುತ್ತಿಗೆದಾರರ ಬಿಲ್ ಬಾಕಿ ಕ್ಲೀಯರ್‌ ಮಾಡಲು ಕಮಿಷನ್ ಕೇಳುತ್ತಿದ್ದಾರೆ ಎಂಬುದನ್ನು ಕೇಳಲ್ಪಟ್ಟೆ. ಜೆಪಿ ಪಾರ್ಕ್‌ನಲ್ಲೂ ಕೂಡ ಸಾಕಷ್ಟು ಕೆಲಸ ನಿಂತು ಹೋಗಿದೆ. ಶೌಚಾಲಯ, ಸ್ವಿಮ್ಮಿಂಗ್ ಪೂಲ್, ಟ್ರ‍್ಯಾಕ್ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ. ಮಳೆ ನೀರು, ರಸ್ತೆ ಎಲ್ಲಾ ಸಮಸ್ಯೆಯನ್ನು ಬಗೆ ಹರಿಸುತ್ತೇನೆ. ಸಾರ್ವಜನಿಕರ ಧ್ವನಿ ಸರ್ಕಾರಕ್ಕೆ ಮುಟ್ಟಬೇಕು. ಅದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.

Share This Article