ಹಾಸನ: ಹಾಸನಾಂಬ ದೇವಿ (Hasanamba Temple) ದರ್ಶನದ ವೇಳೆ ಕರ್ತವ್ಯ ಲೋಪ ಆರೋಪದ ಮೇಲೆ ನಾಲ್ವರು ಕಂದಾಯ ಇಲಾಖೆ (Revenue Department) ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಆರ್‌ಐ ಗೋವಿಂದರಾಜ್ ಹಾಗೂ ಯೋಗಾನಂದ್, ವಿಎ ಸಂತೋಷ್ ಅಂಬಿಗರ ಹಾಗೂ ಶಿರಾಜ್ ಮಹಿಮಾ ಪಟೇಲ್ ಅಮಾನತಾದ ಕಂದಾಯ ಇಲಾಖೆ ಸಿಬ್ಬಂದಿಯಾಗಿದ್ದಾರೆ. ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ದೇವಾಲಯದ ಒಳಬಿಟ್ಟ ಆರೋಪದ ಮೇಲೆ ಅಮಾನತು ಮಾಡಿ ಡಿಸಿ ಕೆ.ಎಸ್.ಲತಾಕುಮಾರಿ ಆದೇಶ ಹೊರಡಿಸಿದ್ದಾರೆ. ಮೊದಲ ದಿನ ಕೂಡ ಕರ್ತವ್ಯದ ಐಡಿ ಕಾರ್ಡ್ ದುರುಪಯೋಗ ಆರೋಪದಲ್ಲಿ ಇಬ್ಬರು ವಾರ್ಡನ್‍ಗಳನ್ನು ಅಮಾನತು ಮಾಡಲಾಗಿತ್ತು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ – ಒಂದೇ ದಿನಕ್ಕೆ 1 ಕೋಟಿ ಆದಾಯ
ಈ ಮೂಲಕ ಕರ್ತವ್ಯ ಪಾಲನೆಯಲ್ಲಿ ಬೇಜವಾಬ್ದಾರಿತನ ತೋರುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯ ಸಂದೇಶವನ್ನು ಜಿಲ್ಲಾಡಳಿತ ನೀಡಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನಕ್ಕೆ ಶನಿವಾರ (ಅ.11) ಸಾವಿರಾರು ಭಕ್ತರು ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದಿದ್ದಾರೆ.
ಕೆಲವರು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಕಾದು ನಿಂತಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚುಗಿತ್ತು. 1 ಸಾವಿರ ಟಿಕಟ್‌ನ ಸಾಲು ಖಾಲಿ ಇದ್ದರೆ, 300 ರೂ. ಟಿಕೆಟ್‌ನ ದರ್ಶನದ ಸರತಿ ಸಾಲು ಸಂಪೂರ್ಣ ಭರ್ತಿಯಾಗಿದ್ದವು. ಇಂದು (ಅ.12) ರಜೆ ಇರುವುದರಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಹಾಸನಾಂಬ ದರ್ಶನ ಪಡೆದ ಸೂರಜ್ ರೇವಣ್ಣ – ಜಿಲ್ಲಾಡಳಿತದ ವ್ಯವಸ್ಥೆಗೆ ಮೆಚ್ಚುಗೆ