ಬೆಂಗಳೂರು: ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಕುರಿತ ಲಿಖಿತ ಪರೀಕ್ಷೆಯನ್ನು (Civil Judge Recruitment Examination) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ಶನಿವಾರ ನಡೆಸಿತು.
ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ನಗರಗಳ ಒಟ್ಟು 21 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಅರ್ಜಿ ಸಲ್ಲಿಸಿದ್ದ 10,069 ಮಂದಿ ಪೈಕಿ 8,408 (ಶೇ.83.5%) ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಬ್ಲೂಟೂತ್ ಇತ್ಯಾದಿ ಡಿಜಿಟಲ್ ಸಾಧನಗಳು ಕಾರ್ಯನಿರ್ವಹಿಸದಂತೆ ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಸಲಾಗಿತ್ತು. ಇಡೀ ಪ್ರಕ್ರಿಯೆಯನ್ನು ಕೆಇಎ ಕಚೇರಿಯಲ್ಲಿನ ಕಮಾಂಡ್ ಸೆಂಟರ್ ಮೂಲಕ ನಿರ್ವಹಿಸಲಾಯಿತು. ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಮೂಲಕ ಕಟ್ಟುನಿಟ್ಟಿನ ನಿಗಾ ವಹಿಸಿದ್ದನ್ನು ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಂ, ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಕಲಾ ಖುದ್ದು ವೀಕ್ಷಿಸಿದರು ಎಂದು ತಿಳಿಸಿದ್ದಾರೆ. ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರೂ ಖುದ್ದು ಮೇಲ್ವಿಚಾರಣೆ ನಡೆಸಿದರು.