– ನ್ಯಾಯಾಲಯದ ತೀರ್ಪಿನ ನಂತರ ಕಸ ವಿಲೇವಾರಿಗಾಗಿ 33 ಪ್ಯಾಕೇಜ್‌ಗಳ ಪ್ರಕ್ರಿಯೆ ಆರಂಭ
– ಪಾಲಿಕೆಗಳ ವತಿಯಿಂದಲೇ ಜಿಬಿಎಯು ಕಸ ವಿಲೇವಾರಿ, ಮೇಲ್ವಿಚಾರಣೆ
ಬೆಂಗಳೂರು: ಬಾಂಬೆ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar), ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಮಿತಿಯ ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳಗೇರಿ ಪ್ರದೇಶಗಳಿದ್ದು, ಅವುಗಳ ಅಭಿವೃದ್ಧಿ ಆಗಬೇಕು ಎಂದು ವಿಷಯ ಪ್ರಸ್ತಾಪಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಶನಿವಾರ ಗುಡ್‌ನ್ಯೂಸ್ ಕೊಡ್ತಾರಾ ಡಿಕೆಶಿ – ಎ-ಖಾತಾ ವಿತರಣೆ ಬಗ್ಗೆ ಸುಳಿವು ಕೊಟ್ಟ ಡಿಸಿಎಂ
ಬೆಂಗಳೂರಿನಲ್ಲಿ ಈ ಹಿಂದೆ ಶಾಂತಿನಗರದಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದ್ದೆವು. ಅದು ಯಶಸ್ವಿಯಾಗಲಿಲ್ಲ. ಹೀಗಾಗಿ, ಜನರು ಈ ವಿಚಾರದಲ್ಲಿ ಹಿಂಜರಿಯುತ್ತಾರೆ. ಅದಕ್ಕಾಗಿ ಈ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ ಎಂದು ತಿಳಿಸಿದರು. ಇದನ್ನೂ ಓದಿ: ನಕ್ಷೆ ಮಂಜೂರಾತಿ, ಟಿಡಿಆರ್ ನೀಡುವ ಅಧಿಕಾರ ಇನ್ಮುಂದೆ GBA ವ್ಯಾಪ್ತಿಗೆ – ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ
ನಮ್ಮ ಕ್ಷೇತ್ರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಪರಿಹಾರಬೇಕು. ಇದನ್ನು ಜಿಬಿಎ ನಿಭಾಯಿಸುವುದೇ ಅಥವಾ ಪಾಲಿಕೆ ನಿಭಾಯಿಸುವುದೇ ಎಂದು ಶಾಸಕ ಎ.ಸಿ.ಶ್ರೀನಿವಾಸ್ ಅವರು ಕೇಳಿದಾಗ, ಕಸ ವಿಲೇವಾರಿ ವಿಚಾರವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 33 ಪ್ಯಾಕೇಜ್ ಟೆಂಡರ್ ಕರೆಯಲಾಗುವುದು. ಈ ವಿಚಾರ ನ್ಯಾಯಾಲಯದಲ್ಲಿದ್ದು, ಶೀಘ್ರವೇ ತೀರ್ಪು ಬರಲಿದ್ದು, ನಂತರ ಈ ಕಾರ್ಯ ಮಾಡಲಾಗುವುದು. ಕಸ ವಿಲೇವಾರಿ ಜವಾಬ್ದಾರಿ ಸ್ಥಳೀಯ ಪಾಲಿಕೆಗಳು ನಿಭಾಯಿಸಲಿವೆ. ಇದರ ಸಮನ್ವಯತೆಯನ್ನು ಜಿಬಿಎ ಪಾಲಿಸಲಿದೆ ಎಂದು ಹೇಳಿದರು.
ಸಂಪೂರ್ಣ ಆನೇಕಲ್ ಜಿಬಿಎ ವ್ಯಾಪ್ತಿಗೆ ಸೇರಿಸುವುದು ಕಷ್ಟ
ಆನೇಕಲ್ ಶಾಸಕರು ತಮ್ಮ ಪ್ರದೇಶವನ್ನು ಜಿಬಿಎ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಈಗ ಘೋಷಣೆ ಆಗಿರುವ ಜಿಬಿಎ ವ್ಯಾಪ್ತಿಯಲ್ಲಿ ಮೊದಲು ಚುನಾವಣೆ ಆಗಲಿದೆ. ನಂತರ ಎಲ್ಲೆಲ್ಲಿ ಅಭಿವೃದ್ಧಿ ಆಗಿದೆ ಆ ಜಾಗಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸಲು ಸಮಿತಿ ರಚಿಸಿ ಯಾವ ಪ್ರದೇಶ ಸೇರಿಸಬೇಕು ಎಂದು ತೀರ್ಮಾನ ಮಾಡಲಾಗುವುದು. ಚುನಾವಣೆ ನಂತರ ಈ ಪ್ರಕ್ರಿಯೆಗೆ ಕೈ ಹಾಕಲಾಗುವುದು. ಈಗ ಜಿಬಿಎ ವ್ಯಾಪ್ತಿಗೆ ಸೇರಿಸಿದರೆ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಪಾಲಿಕೆ ಸದಸ್ಯರಾಗುತ್ತಾರೆ. ಇನ್ನು ಅಲ್ಲಿನ ಜನರು ಕೂಡ ಬೆಂಗಳೂರಿನವರಂತೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇಡೀ ಆನೇಕಲ್ ತಾಲೂಕನ್ನು ಜಿಬಿಎ ವ್ಯಾಪ್ತಿಗೆ ಸೇರಿಸಿದರೆ 110 ಹಳ್ಳಿಗಳಿಗೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಯಾವ ಪ್ರದೇಶ ನಗರದಂತೆ ಅಭಿವೃದ್ಧಿಯಾಗಿದೆಯೋ ಆ ಪ್ರದೇಶಗಳನ್ನು ಮಾತ್ರ ಜಿಬಿಎ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೀದಿ ವ್ಯಾಪಾರಿಗಳಿಗೆ ಶೀಘ್ರವೇ ವಾಹನ ವ್ಯವಸ್ಥೆ
ಪರಿಷತ್ ಸದಸ್ಯ ಗೋವಿಂದರಾಜು ಅವರು ಬೀದಿ ವ್ಯಾಪಾರಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಸುದೀರ್ಘ ಚರ್ಚೆ ಮಾಡಿದ್ದು, ಬೀದಿ ವ್ಯಾಪಾರಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೇವೆ. 30 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿಯಾಗಿದ್ದು, ಅವರಿಗೆ ನಾಲ್ಕು ರೀತಿಯ ವಾಹನ ನೀಡಲು ಸಿದ್ಧತೆ ಮಾಡುತ್ತಿದ್ದೇವೆ. ಈ ವಾಹನಗಳಲ್ಲಿ ಅವರು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅನಾಥ ವಾಹನಗಳನ್ನು ನಗರದ ಹೊರಗೆ ಸ್ಥಳಾಂತರಿಸಬೇಕು
ಶಾಸಕ ರಿಜ್ವಾನ್ ಅರ್ಷದ್ ಅವರು ಬೆಂಗಳೂರಿನಲ್ಲಿ ಅನಾಥ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಸಂಚಾರ ದಟ್ಟಣೆ ಹಾಗೂ ಕಸದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ನಗರದ ಹೊರಗೆ 10 ಎಕ್ರೆ ಪ್ರದೇಶ ಗುರುತಿಸಿ, ಅಲ್ಲಿ ಈ ವಾಹನಗಳನ್ನು ಸ್ಥಳಾಂತರ ಮಾಡಬೇಕು ಎಂದು ವಿಚಾರ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಜಾಗಗಳನ್ನು ಗುರುತಿಸಿ ಅಲ್ಲಿ ಕಾಂಪೌಂಡ್ ಹಾಕಿ ವಾಹನಗಳನ್ನು ಸ್ಥಳಾಂತರಿಸಲಾಗುವುದು. ಆಗ ಆ ವಾಹನಗಳನ್ನು ಬೇರೆಯವರು ಕದಿಯಲು ಆಗುವುದಿಲ್ಲ ಎಂದರು.