ಮತ್ತೊಮ್ಮೆ ದ್ವಿಶತಕ ಸಿಡಿಸುವ ತವಕದಲ್ಲಿ ಜೈಸ್ವಾಲ್‌ -ಬೃಹತ್‌ ಮೊತ್ತದತ್ತ ಭಾರತ

Public TV
2 Min Read

– ಶತಕ ಬಾರಿಸಿ ಸಚಿನ್‌ ಬಳಿಕ ವಿಶೇಷ ಸಾಧನೆ ಮಾಡಿದ ಯಶಸ್ವಿ

ನವದೆಹಲಿ: ವಿಂಡೀಸ್‌ (West Indies) ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ 2ನೇ ಪಂದ್ಯದಲ್ಲಿ ಭಾರತ (Team India) ಮೊದಲ ದಿನವೇ 300 ರನ್‌ಗಳ ಗಡಿ ದಾಟಿದೆ. ಮೊದಲ ದಿನದ ಅಂತ್ಯಕ್ಕೆ ಕೇವಲ 2 ವಿಕೆಟ್‌ಗೆ 90 ಓವರ್‌ಗಳಲ್ಲಿ 318 ರನ್‌ ಸಿಡಿಸಿದ್ದು, ಬೃಹತ್‌ ಮೊತ್ತ ಪೇರಿಸುವ ವಿಶ್ವಾಸದಲ್ಲಿದೆ.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ದಿನ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ (Yashasvi Jaiswal) ವಿಕೆಟ್‌ ಬಿಟ್ಟುಕೊಡದೇ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. 173 ರನ್‌ ಗಳಿಸಿ ಕ್ರೀಸ್‌ನಲ್ಲಿರುವ ಯಶಸ್ವಿ ಮತ್ತೊಮ್ಮೆ ದ್ವಿಶತಕ ಸಿಡಿಸುವ ವಿಶ್ವಾಸದಲ್ಲಿದ್ದಾರೆ.

ಭಾರತ ಪರ ಕೆ.ಎಲ್ ರಾಹುಲ್ (KL Rahul) ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ವಿಕೆಟ್​ಗೆ ಈ ಜೋಡಿ 58 ರನ್​ಗಳ ಜೊತೆಯಾಟ ಆಡಿತು. ರಾಹುಲ್ 54 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ಊಟದ ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 145 ಎಸೆತಗಳಲ್ಲಿ 16 ಫೋರ್​ನೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 7ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಅತ್ತ ಸಾಯಿ ಸುದರ್ಶನ್ ಕೂಡ ಅರ್ಧಶತಕ ಸಿಡಿಸಿ ಮಿಂಚಿದರು.

ಸುದರ್ಶನ್‌ ಕೈತಪ್ಪಿದ ಶತಕ
ಇನ್ನೂ ಅರ್ಧಶತಕ ಗಳಿಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ಸುದರ್ಶನ್‌ ಶತಕ ವಂಚಿತರಾದರು. 165 ಎಸೆತಗಳಲ್ಲಿ 12 ಬೌಂಡರಿ ಸಹಿತ 87 ರನ್‌ ಗಳಿಸಿ ಔಟಾದರು. ನಂತರ ಕ್ರೀಸ್‌ಗೆ ಬಂದ ಶುಭಮನ್‌ ಗಿಲ್‌ 68 ಎಸೆತಗಳಲ್ಲಿ 20 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ದಿನದ ಕೊನೆಯವರೆಗೂ ವಿಕೆಟ್‌ ಬಿಟ್ಟು ಕೊಡದ ಜೈಸ್ವಾಲ್‌ 253 ಎಸೆತಗಳಲ್ಲಿ 22 ಬೌಂಡರಿ ಸಹಿತ 173 ರನ್‌ ಬಾರಿಸಿದ್ದಾರೆ. ಶನಿವಾರ 2ನೇ ದಿನದ ಆಟ ಮುಂದುವರಿಸಲಿದ್ದಾರೆ.

ವಿಶೇಷ ದಾಖಲೆ ಬರೆದ ಜೈಸ್ವಾಲ್‌
ಇನ್ನೂ ಈ ಪಂದ್ಯದ ಮಧ್ಯೆ ಜೈಸ್ವಾಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದರು. ಅವರು 3,000 ರನ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು. ಈ ಪಂದ್ಯಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 25 ಟೆಸ್ಟ್ ಪಂದ್ಯಗಳ 47 ಇನ್ನಿಂಗ್ಸ್‌ಗಳಲ್ಲಿ 2,245 ರನ್ ಗಳಿಸಿದ್ದರು. ಇದರಲ್ಲಿ 6 ಶತಕಗಳು ಮತ್ತು 12 ಅರ್ಧಶತಕಗಳು ಸೇರಿವೆ. ಜೈಸ್ವಾಲ್ ಅವರ ಟೆಸ್ಟ್ ಸರಾಸರಿ ಸುಮಾರು 49.88 ಆಗಿದ್ದು, ಇದನ್ನು ಅತ್ಯುತ್ತಮ ಪರಿಗಣಿಸಬಹುದು.

ಜೈಸ್ವಾಲ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕವೇ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಆಗಲೂ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದರು. ಅಲ್ಲದೇ 23ನೇ ವರ್ಷ ವಯಸ್ಸಿನವರಲ್ಲಿ ಸಚಿನ್‌ ತೆಂಡೂಲ್ಕರ್‌ ಬಳಿಕ ಅಧಿಕ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಚಿನ್‌ 23 ವರ್ಷದ ಹೊತ್ತಿಗೆ 11 ಶತಕ ಗಳಿಸಿದ್ದರೆ, ಯಶಸ್ವಿ 7 ಶತಕ ಗಳಿಸಿದ್ದಾರೆ. ಇನ್ನುಳಿದಂತೆ ರವಿ ಶಾಸ್ತ್ರಿ ಹಾಗೂ ದಿಲೀಪ್ ವೆಂಗ್‌ಸರ್ಕಾರ್ ತಲಾ 5 ಶತಕ ಗಳಿಸಿದ್ದು, ಕ್ರಮವಾಗಿ ಮೂರು ಮತ್ತು 4ನೇ ಸ್ಥಾನದಲ್ಲಿದ್ದಾರೆ.

Share This Article