ಹಾಸನಾಂಬ ದೇವಿಯ ದರ್ಶನದ ಮೊದಲ ದಿನವೇ ಭಾರೀ ಮಳೆ

Public TV
2 Min Read

– ಮಳೆ ಲೆಕ್ಕಿಸದೇ ದೇವಿಯ ದರ್ಶನ ಪಡೆದು ಪುನೀತರಾದ ಸಾವಿರಾರು ಭಕ್ತರು

ಹಾಸನ: ಹಾಸನಾಂಬ ದೇವಿ (Hasnaba Devi) ಸಾರ್ವಜನಿಕ ದರ್ಶನದ ಮೊದಲ‌ ದಿನವೇ ಹಾಸನ ಜಿಲ್ಲೆಯ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ.

ತಡರಾತ್ರಿಯಿಂದ (Heavy Rain) ಹಾಸನ, ಹೊಳೆನರಸೀಪುರ, ಬೇಲೂರು, ಅರಕಲಗೂಡು, ಸಕಲೇಶಪುರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇಂದು ಬೆಳಿಗ್ಗೆ ಆರು ಗಂಟೆಯಿಂದ ಸಾರ್ವಜನಿಕ ದರ್ಶನ ಆರಂಭಗೊಂಡಿದ್ದು ಮಳೆಯ ನಡುವೆಯೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ಹಾಸನಾಂಬ ಜಾತ್ರಾ ಮಹೋತ್ಸವದ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಕರ್ತವ್ಯಕ್ಕೆ ಬರಲಾಗದೇ ವಿವಿಧ ಇಲಾಖೆ ಸಿಬ್ಬಂದಿ ಪರದಾಟ ಅನುಭವಿಸುತ್ತಿದ್ದಾರೆ.

 

ಹಾಸನ ನಗರದಲ್ಲಿ ಭಾರೀ ಮಳೆ:  ಹಾಸನ ನಗರದ ಸೇರಿದಂತೆ ಹಲವೆಡೆ ರಾತ್ರಿಯಿಂದ ನಿರಂತರವಾಗಿ ಸತತ ಸತತ ಆರು ಗಂಟೆಗಳಿಂದ ಮಳೆಯಾಗುತ್ತಿದೆ. ಮಳೆಯ ನಡುವೆಯೂ ಸರತಿ ಸಾಲುಗಳಲ್ಲಿ ನಿಂತು ಸಹಸ್ರಾರು ಭಕ್ತರು ದರ್ಶನಕ್ಕೆ ಕಾದಿದ್ದಾರೆ. ಇಂದಿನಿಂದ 13 ದಿನ ಸಾರ್ವಜನಿಕ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.  ಇದನ್ನೂ ಓದಿ:  24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, 12 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಗೋಲ್ಡ್‌ ಪಾಸ್‌: ಈ ಬಾರಿ ಹಾಸನಾಂಬೆ ದರ್ಶನೋತ್ಸವದಲ್ಲಿ ಜಿಲ್ಲಾಡಳಿತ ಹಲವು ಮಹತ್ತರ ಬದಲಾವಣೆ ತಂದಿದೆ. ಹತ್ತಾರು ವರ್ಷಗಳಿಂದ ಇದ್ದ ವಿಐಪಿ, ವಿವಿಐಪಿ ಪಾಸ್‌ಗಳನ್ನು ಸಂಪೂರ್ಣ ರದ್ದು ಮಾಡಿ ಈ ವರ್ಷದಿಂದ ಗೋಲ್ಡ್‌ ಪಾಸ್‌ ಜಾರಿಗೆ ತಂದಿದೆ.

ಮಾಜಿ ಶಾಸಕರು, ಕೆಲ ಉನ್ನತ ಮಟ್ಟದ ಅಧಿಕಾರಿಗಳು, ಕೆಲ ಗಣ್ಯ ವ್ಯಕ್ತಿಗಳಿಗೆ ಮಾತ್ರ ಗೋಲ್ಡ್ ಪಾಸ್ (Gold Pass) ವಿತರಿಸಲಾಗಿದೆ. ಒಬ್ಬರಿಗೆ ಒಂದು ಗೋಲ್ಡ್ ಪಾಸ್ ಪಡೆದು ಸರತಿ ಸಾಲಿನಲ್ಲಿ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಗೋಲ್ಡ್ ಪಾಸ್‌ನಲ್ಲಿ ದಿನಾಂಕ ನಿಗದಿ ಮಾಡಲಾಗಿದ್ದು ನಿಗದಿಯಾದ ದಿನ ಮತ್ತು ಸಮಯದಲ್ಲೇ ಗೋಲ್ಡ್ ಪಾಸ್‌ನಲ್ಲಿ ಬರುವ ವ್ಯಕ್ತಿಗಳು ದರ್ಶನ ಮಾಡಬೇಕಾಗುತ್ತದೆ. ದಿನಕ್ಕೆ ಒಂದು ಸಾವಿರ ಪಾಸ್ ಮಾತ್ರ ವಿತರಣೆ ಮಾಡಲಾಗಿದೆ.

ಬೆಳಿಗ್ಗೆ 7 ರಿಂದ 10 ಗಂಟೆವರೆಗೆ ಮಾತ್ರ ಗೋಲ್ಡ್ ಪಾಸ್‌ಗೆ ಅವಕಾಶ ನೀಡಲಾಗಿದೆ. 10 ಗಂಟೆಯ ನಂತರ ನಂತರ ಗೋಲ್ಡ್ ಪಾಸ್ ಹಿಡಿದು ಬಂದರೂ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ ಶಿಷ್ಟಾಚಾರದ ಅಡಿ ಬರುವ ಗಣ್ಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

 

Share This Article