– ಹೆಚ್ಚುವರಿ ಕಾಲಾವಕಾಶ ಕೇಳುವಂತಿಲ್ಲ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಸಿಎಂ ಪತ್ನಿ ವಿರುದ್ಧದ ಮುಡಾ ಪ್ರಕರಣದ (Muda Case) ತನಿಖೆ ಪೂರ್ಣಗೊಳಿಸಲು ತನಿಖಾ ಸಂಸ್ಥೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2 ತಿಂಗಳು ಗಡುವು ನೀಡಿದೆ.
ಕಳೆದ 6 ತಿಂಗಳಿಂದ ತನಿಖೆಯಲ್ಲಿ ಪ್ರಗತಿ ಆಗದ ಹಿನ್ನೆಲೆ ಅರ್ಜಿದಾರರು ಬಿ ರಿಪೋರ್ಟ್ ಸಲ್ಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ, ಇಂದಿಗೆ ಆದೇಶ ಕಾಯ್ದಿರಿಸಿತ್ತು. ಆದೇಶದಲ್ಲಿ 2 ತಿಂಗಳ ಒಳಗಾಗಿ ತನಿಖೆಯನ್ನು ಸಂಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ಹೆಚ್ಚುವರಿಯಾಗಿ ಕಾಲಾವಕಾಶ ಕೋರುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ:ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್; ಅಕ್ರಮವಾಗಿ 14 ನಿವೇಶನ ಬಂದಿಲ್ಲ ಎಂದಾದರೆ, ಅದನ್ನು ಹಿಂತಿರುಗಿಸಿದ್ದೇಕೆ? – ವಿಜಯೇಂದ್ರ
ಲೋಕಾಯುಕ್ತ ಪೊಲೀಸರು ತನಿಖೆಯ ನೆಪದಲ್ಲಿ ಕಾಲಹರಣ ಮಾಡುತ್ತಾ ಇದ್ದಾರೆ. ಹೀಗಾಗಿ ಬಿ ರಿಪೋರ್ಟ್‌ಗೆ ತೀರ್ಮಾನ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಲಯ ನವೆಂಬರ್ 15ಕ್ಕೆ ವಿಚಾರಣೆ ಮುಂದೂಡಿದೆ. ತನಿಖಾಧಿಕಾರಿ ಬದಲಾವಣೆ ಮಾಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ಇದೇ ವೇಳೆ ವಜಾ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ಇಂದು ಆದೇಶ ಮಾಡುವ ನಿರೀಕ್ಷೆ ಇತ್ತು. ನ್ಯಾಯಾಲಯ ತನಿಖಾಧಿಕಾರಿ ಬದಲಾವಣೆ ಮಾಡಲು ಕೋರಿದ್ದ ಅರ್ಜಿ ವಜಾ ಮಾಡಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಅಂತಿಮ ವರದಿ ಸಲ್ಲಿಕೆಗೆ 2 ತಿಂಗಳ ಕಾಲಾವಕಾಶ ನೀಡಿದೆ. ಅಂತಿಮ ವರದಿ ಸಲ್ಲಿಕೆ ಬಳಿಕ ಬಿ- ರಿಪೋರ್ಟ್ ವಿರುದ್ಧ ತೀರ್ಪು ಪ್ರಕಟಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್, ಸಿಎಂಗೆ ಕ್ಲೀನ್ ಚಿಟ್ – 11,200 ಪುಟಗಳ ತನಿಖಾ ವರದಿ ಸಲ್ಲಿಕೆ