ಮಡಿಕೇರಿ: ಇಲ್ಲಿನ ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ (Fire) ಅವಘಡ ಸಂಭವಿಸಿ, ಓರ್ವ ವಿದ್ಯಾರ್ಥಿ ಸಜೀವ ದಹನವಾಗಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ.
ಚೆಟ್ಟಿಮಾನಿ ಗ್ರಾಮದ ನಿವಾಸಿ ಪುಷ್ಪಕ್(7) ಮೃತ ವಿದ್ಯಾರ್ಥಿ. ಪುಷ್ಪಕ್ ಮಡಿಕೇರಿ ತಾಲೂಕಿನ ಕಾಟಗೇರಿ ಖಾಸಗಿ ವಸತಿ ಶಾಲೆಯಲ್ಲಿ ಎರಡನೇ ವ್ಯಾಸಂಗ ಮಾಡುತ್ತಿದ್ದ. ಇಂದು ಬೆಳಗ್ಗೆ ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾನೆ.
ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳು ಮಲಗಿರುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕೊಠಡಿಯಲ್ಲಿ ಸುಮಾರು 35 ಕ್ಕೂ ಹೆಚ್ಚು ಮಕ್ಕಳು ಬೆಂಕಿ ಕಂಡು ಕೊಠಡಿಯಿಂದ ಓಡಿಹೋಗಿದ್ದಾರೆ. ಇನ್ನೂ ಕೆಲವರು ಭಯದಲ್ಲೇ ಹಾಗೂ ಭಾರೀ ಹೊಗೆಯ ವಾತಾವರಣದಿಂದ ಹೊರಗೆ ಹೋಗಲಾರದೇ ಕಿರುಚಾಟ ನಡೆಸಿದ್ದರು.
ವಸತಿ ಸಿಬ್ಬಂದಿ ಕೆಲ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ವಿದ್ಯಾರ್ಥಿ ಪುಷ್ಪಕ್ ಮಾತ್ರ ದಟ್ಟ ಹೊಗೆ ಅವರಿಸಿದ ಹಿನ್ನಲೆಯಲ್ಲಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಹೋಗಿದ್ದ ಎನ್ನಲಾಗಿದೆ. ಸಿಬ್ಬಂದಿ ಮಕ್ಕಳ ಎಣಿಕೆ ಮಾಡುವ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿ ಕಾಣೆಯಾಗಿದ್ದಾನೆ ಎಂದು ಕೊಠಡಿ ಒಳಗೆ ನುಗ್ಗಿ ಹುಡುಕಾಟ ನಡೆಸುವ ಸಂದರ್ಭದಲ್ಲಿ ಪುಷ್ಪಕ್ ಜೀವಂತ ದಹನವಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಫೈರ್ ಬ್ರಿಗೇಡ್ ಅಧಿಕಾರಿ ನಾಗರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪೋಷಕರು ಸಹ ಸ್ಥಳಕ್ಕಾಗಮಿಸಿದ್ದಾರೆ.