ಮಡಿಕೇರಿ: ಮಡಿಕೇರಿ ದಸರಾಕ್ಕೆ (Madikeri Dasara) ವಿದ್ಯುಕ್ತವಾಗಿ ತೆರೆ ಬಿದ್ದು ನಾಲ್ಕು 5 ದಿನ ಕಳೆದರು ಇಂದಿನ ದಸರಾದ ದಶಮಂಟಪಗಳ ಸಮಿತಿಯ ಸದಸ್ಯರು ಗೊಂದಲಕ್ಕೆ ಸಿಲುಕಿದ್ದಾರೆ. ನ್ಯಾಯಾಲಯದ ಆದೇಶವನ್ನ ಸಮಿತಿಯ ಸದಸ್ಯರು ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸರೇ ಸ್ವಯಂ ಪ್ರೇರಿತವಾಗಿ ಸಮಿತಿಯ ಸುಮಾರು 62 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ದಶಮಂಟಪಗಳ ಸಮಿತಿಯ ಸದಸ್ಯರು ಪೊಲೀಸ್ (Madikeri Police) ಇಲಾಖೆಯ ವಿರುದ್ಧ ಆಕ್ರೋಶ ಹೋರ ಹಾಕುತ್ತಿದ್ದಾರೆ.
ಐತಿಹಾಸಿಕ ಮಡಿಕೇರಿ ದಸರಾಕ್ಕೆ ವರ್ಣರಂಜಿತವಾಗಿ ತೆರೆ ಬಿದ್ದಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ಮಡಿಕೇರಿ ದಸರಾಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ದಶ ದೇವಾಲಯಗಳಿಂದ ಸಿದ್ಧ ಪಡಿಸುವ ಪೌರಾಣಿಕ ಕಥಾ ಸಾರಾಂಶ ನೋಡಲು ಆಗಮಿಸುತ್ತಾರೆ. ಅಲ್ಲದೇ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಖುಷಿ ಪಡುತ್ತಾರೆ. ಆದರೆ ಈ ಬಾರಿ ಮಡಿಕೇರಿ ದಸರಾಕ್ಕೆ ಡಿಜೆ ಬಳಸಬಾರದು ಎಂದು ಪೊಲೀಸ್ ಇಲಾಖೆ ಮೊದಲೇ ಸೂಚಿಸಿತ್ತು. ಅದರಂತೆ ದಶಮಂಟಪ ಸಮಿತಿ ಸದಸ್ಯರೂ ಕೂಡ ನಡೆದುಕೊಂಡಿದ್ದರು. ಆದರೆ ದೇವಾಲಯಗಳ ಪೌರಾಣಿಕ ಕಥಾ ಸಾರಾಂಶ ಪ್ರಸ್ತುತ ಪಡಿಸುವ ವೇಳೆಯಲ್ಲಿ ಧ್ವನಿವರ್ಧಕದ ಶದ್ಧ ಸ್ವಲ್ಪ ಜಾಸ್ತಿ ಮಾಡಬೇಕಾಗುತ್ತದೆ ಎಂದು ಕೇಳಿಕೊಂಡಿದ್ದರು. ಆದಾಗ್ಯೂ ದಸರಾ ಮುಗಿದ ಬಳಿಕ ದೇವಾಲಯ ಸಮಿತಿ ಸದಸ್ಯರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರಾತ್ರಿ 10 ಗಂಟೆ ನಂತರ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಧ್ವನಿವರ್ಧಕ ಬಳಸಬಾರದೆಂಬ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅ.2 ರಂದು ದಶಮಂಟಪ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಸಲಾಗಿದೆ ಎಂದು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ನಗರದ ಪೇಟೆ ಶ್ರೀರಾಮಮಂದಿರ, ದೇಚೂರು ಶ್ರೀರಾಮ ಮಂದಿರ. ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋದಂಡ ರಾಮ ದೇವಾಲಯ ಮಂಟಪ ಸಮಿತಿಗಳ ತಲಾ 6 ಮಂದಿ, ಕರವಲೆ ಭಗವತಿ, ಕೋಟೆ ಮಾರಿಯಮ್ಮ ಮಂಟಪ ಸಮಿತಿಗಳ ತಲಾ 7 ಮಂದಿ, ಕೋಟೆ ಗಣಪತಿಯ 8 ಮಂದಿ ಚೌಡೇಶ್ವರಿ ಹಾಗೂ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಮಂಟಪ ಸಮಿತಿಯ ತಲಾ 5 ಮಂದಿ ವಿರುದ್ಧ ಸೆಕ್ಷನ್ 37, 109, ಅಡಿ ಪ್ರಕರಣಗಳು ದಾಖಲಾಗಿವೆ.
ಇದರಿಂದ ಸಮಿತಿ ಸದಸ್ಯರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರಕರಣ ರದ್ದುಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಬೇಕಾಗುತ್ತದೆ. ಪ್ರತಿಭಟನೆ ಕೂಡ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.