– ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಐವರು ಆರೋಪಿಗಳು
ಮೈಸೂರು: ನಗರದ ಅರಮನೆ ಬಳಿ ನಿನ್ನೆ ಮಧ್ಯಾಹ್ನ ರೌಡಿ ಶೀಟರ್ (Rowdy Sheeter) ಸಹವರ್ತಿಯ ಬರ್ಬರ ಕೊಲೆಯಾಗಿತ್ತು. ಕೊಲೆಗೆ ಡಾನ್ ಪಟ್ಟಕ್ಕಾಗಿ ಶುರುವಾದ ಪೈಪೋಟಿಯೆ ಕಾರಣ ಅನ್ನೋದು ಈಗ ಸ್ಪಷ್ಟವಾಗಿದೆ. ಅಲ್ಲದೇ ಆರೋಪಿಗಳೇ ಪೊಲೀಸರಿಗೆ ಶರಣಾಗಿರೋದು ಅಚ್ಚರಿ.
ಹೌದು.. ನಿನ್ನೆ ಮಧ್ಯಾಹ್ನ ಮೈಸೂರಿನ ಅರಮನೆ (Mysuru Palace) ಬಳಿಯೇ ನಡುರಸ್ತೆಯಲ್ಲಿ ರೌಡಿ ಶೀಟರ್ ಕಾರ್ತಿಕ ಸಹವರ್ತಿ ಗಿಲಿ ಗಿಲಿ ವೆಂಕಟೇಶ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದ ಆರು ಜನರು ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದ ವೆಂಕಟೇಶ್‌ನನ್ನು ನಿಲ್ಲಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ರು. ಈ ಘಟನೆ ಮೈಸೂರನ್ನ ಬೆಚ್ಚಿಬೀಳಿಸಿತ್ತು. ಈ ಹಿಂದೆ ಹತ್ಯೆ ಆಗಿದ್ದ ರೌಡಿಶೀಟರ್ ಕಾರ್ತಿಕ್ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದ ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಗಳು ಇದೀಗ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ.
ಪೊಲೀಸರಿಗೆ ಶರಣಾದ ಆರೋಪಿಗಳು ಯಾತಕ್ಕಾಗಿ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದು.. ರೌಡಿ ಫೀಲ್ಡ್‌ನಲ್ಲಿ ಡಾನ್ ಪಟ್ಟಕ್ಕಾಗಿ ನಡೆದ ಪೈಪೋಟಿಯಿಂದಲೇ ಕೊಲೆ ಎಂಬುದು ಬಯಲಾಗಿದೆ.
ಒಂದೇ ಗ್ಯಾಂಗ್‌ನಲ್ಲಿದ್ದವರ ಮಧ್ಯೆ ಪಟ್ಟಕ್ಕಾಗಿ ಪೈಪೋಟಿ
ಐದು ತಿಂಗಳ ಹಿಂದೆ ಮೈಸೂರಿನ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್‌ನ ಮರ್ಡರ್ ಆಗಿತ್ತು. ಹೀಗಾಗಿ ಕಾರ್ತಿಕ್‌ಗೆ ಇದ್ದ ಡಾನ್ ಪಟ್ಟದಲ್ಲಿ ಯಾರು ಕೂರಬೇಕು ಎಂಬ ಬಗ್ಗೆ ಕಾರ್ತಿಕ್ ಗುಂಪಿನಲ್ಲೇ ಪೈಪೋಟಿ ಶುರುವಾಗಿತ್ತು. ಡಾನ್ ಪಟ್ಟಕ್ಕಾಗಿ ಕೊಲೆಯಾದ ವೆಂಕಟೇಶ್ ಹಾಗೂ ಕೊಲೆಯ ರೂವಾರಿ ಹಾಲಪ್ಪ ನಡುವೆ ಒಳ ಜಗಳ ನಡೆಯುತ್ತಿತ್ತು. ಕಾರ್ತಿಕ್ ಕೊಲೆಗೂ ಮುನ್ನ ಮನಃಸ್ತಾಪವಾಗಿ ವೆಂಕಟೇಶ್ ಈ ಗುಂಪಿನಿಂದ ಬೇರೆ ಆಗಿದ್ದ. ಕಾರ್ತಿಕ್ ಕೊಲೆ ನಂತರ ಫೀಲ್ಡ್‌ನಲ್ಲಿ ಮತ್ತೆ ಮೆರೆಯಲು ವೆಂಕಟೇಶ್ ಶುರು ಮಾಡಿದ್ದ. ಇದನ್ನು ಸಹಿಸದ ಹಾಲಪ್ಪ ಹಾಗೂ ಸಹಚರರು ಜಗಳ ಶುರು ಮಾಡಿದ್ದರು.
ಹಾಲಪ್ಪ ತನ್ನ ಡಾನ್ ಪಟ್ಟಕ್ಕೆ ಅಡ್ಡಿಯಾಗಿದ್ದಾನೆ ಎಂದು ಗಿಲಿ ಗಿಲಿ ವೆಂಕಟೇಶ ಹಾಲಪ್ಪನ ಕೊಲೆಗೆ ಸ್ಕೆಚ್ ಹಾಕಿದ್ದ. ಹಾಲಪ್ಪನನ್ನು ಕೊಲ್ಲಲು ವೆಂಕಟೇಶ್ ಹಾಗೂ ಅವನ ಶಿಷ್ಯಂದಿರು ಹುಡುಕಾಟ ನಡೆಸಿದ್ದರು. ವಾರದ ಹಿಂದೆ ಹಾಲಪ್ಪ ಸ್ನೇಹಿತ ಮಂಜುನಾಥ್ ಮನೆ ಮುಂದೆ ಹಾಲಪ್ಪ ಎಲ್ಲಿ ಅಂತಾ ಜಗಳವಾಡಿದ್ದರು. ಈ ಸಂಬಂಧ ನಜರಬಾದ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ಈ ನಡೆಗೆ ಬೆಚ್ಚಿದ್ದ ಹಾಲಪ್ಪ, ಪ್ರತಿಯಾಗಿ ಗಿಲಿಗಿಲಿ ವೆಂಕಟೇಶ್ ಕೊಲೆಗೆ ಸ್ಕೆಚ್ ಹಾಕಿದ್ದ. ತನ್ನ ಐವರು ಸಹಚರರನ್ನು ಬಿಟ್ಟು ವೆಂಕಟೇಶ್‌ನನ್ನ ನಡು ರಸ್ತೆಯಲ್ಲೇ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ಬಳಿಕ ಹಾಲಪ್ಪ ಎಸ್ಕೇಪ್ ಆಗಿದ್ದಾನೆ. ಸಹಚರರು ಪೊಲೀಸರಿಗೆ ಶರಣಾಗಿದ್ದಾರೆ.
ಈ ಕೊಲೆ ಮೂಲಕ ಮೈಸೂರಲ್ಲಿ ರೌಡಿಸಂ ಮತ್ತೆ ಗರಿ ಬಿಚ್ಚಿ ಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಪೊಲೀಸರು ಈಗಲೇ ಈ ಗರಿಗಳ ಕತ್ತರಿ ಹಾಕಬೇಕಿದೆ.