ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

Public TV
2 Min Read

– ಹೈಕೋರ್ಟ್‌ನಲ್ಲಿ ಅರ್ಜಿ ಹಿಂದಕ್ಕೆ ಪಡೆಯಲಿರುವ ಜಾಲಿವುಡ್‌

ಬೆಂಗಳೂರು: ಬಿಗ್‌ಬಾಸ್‌ಗೆ (Bigg Boss) ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಲಿವುಡ್‌ ಸ್ಟುಡಿಯೋಗೆ (Jollywood Studios and Adventures) ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯವರು ಸಮಸ್ಯೆ ಇತ್ಯರ್ಥ್ಯಕ್ಕೆ 10 ದಿನಗಳ ತಾತ್ಕಾಲಿಕ ಕಾಲಾವಕಾಶ ನೀಡಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಜಾಲಿವುಡ್‌ ಸ್ಟುಡಿಯೋ ಪರ ವಕೀಲ ವಿಶ್ವಾಸ್‌ ಗೌಡ ಮಾತನಾಡಿ, ಇಂದು ನಮ್ಮ ಕಕ್ಷಿದಾರರು ಜಿಲ್ಲಾಧಿಕಾರಿಗಳು ಭೇಟಿ ಮಾಡಿ ಮಾತನಾಡಿದ್ದಾರೆ. ಈಗ ಡಿಸಿಯವರು 10 ದಿನ‌ ಕಾಲಾವಕಾಶ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  Bigg Boss | ಉಲ್ಲಂಘನೆಯಾಗಿದ್ರೆ ಸರಿ ಮಾಡಲು ಅವಕಾಶ ಕೊಡಿ: ಡಿಕೆಶಿ ಸಾಫ್ಟ್‌ ಕಾರ್ನರ್‌

ಅ.6 ರಂದು ನೋಟಿಸ್‌ ನೀಡಿ ಅ.7 ರಂದು ಬೀಗ ಹಾಕಿದ್ದನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ಗೆ ರಿಟ್‌ ಅರ್ಜಿ ಹಾಕಿದ್ದೆವು. ಈಗ ಜಿಲ್ಲಾಡಳಿತ 10 ದಿನಗಳ ಕಾಲಾವಕಾಶ ನೀಡಿದ್ದರಿಂದ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಬೀಗ; ಸುದೀಪ್‌ಗೂ ಡಿಕೆಶಿಗೂ ತಂದಿಡೋದು ಬೇಡ: ಶಾಸಕ ಬಾಲಕೃಷ್ಣ

ಇನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಯಾವುದೇ ಆದೇಶ ಪ್ರಕಟವಾಗಿಲ್ಲ.  ಅಧಿಕೃತ ಆದೇಶ ಪ್ರಕಟಗೊಂಡ ಬಳಿಕ  ಎಷ್ಟು ದಿನಗಳವರೆಗೆ  ತಾತ್ಕಾಲಿಕ ಕಾಲಾವಕಾಶ ನೀಡಿದ್ದಾರೆ ಎನ್ನುವುದು  ತಿಳಿಯಲಿದೆ.

ಬಿಗ್‌ ಬಾಸ್‌ (Bigg Boss) ಮನೆಗೆ ಬೀಗ ಜಡಿದ ಬೆನ್ನಲ್ಲೇ ಜಾಲಿವುಡ್‌ ಸ್ಟುಡಿಯೋ(ವೇಲ್ಸ್‌ ಸ್ಟುಡಿಯೋ ಆಂಡ್‌ ಎಂಟರ್‌ಟೈನ್ಮೆಂಟ್‌ ಪ್ರೈ. ಲಿ.) ಇಂದು ಹೈಕೋರ್ಟ್‌ಗೆ (High Court) ತುರ್ತು ಅರ್ಜಿ ಸಲ್ಲಿಸಿತ್ತು. ಕೋರ್ಟ್‌ ಈ ಅರ್ಜಿಯನ್ನು ಪುರಸ್ಕರಿಸಿದ್ದು ನ್ಯಾ.ಸೂರಜ್ ಗೋವಿಂದರಾಜ್ ಅವರ ಪೀಠದಲ್ಲಿ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಿಗದಿಯಾಗಿದೆ.

ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಮಯದಲ್ಲೇ ನಮ್ಮ ಅಹವಾಲು ಆಲಿಸದೇ ತರಾತುರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಮಂದಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಲಾಗಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶಕ್ಕೆ ತಡೆ ನೀಡಬೇಕು. ಅಷ್ಟೇ ಅಲ್ಲದೇ ಬೇರೆ ಯಾವುದೇ ಸಂಸ್ಥೆ ಹೊರಡಿಸುವ ಆದೇಶಕ್ಕೂ ತಡೆ ನೀಡಬೇಕೆಂದು ಕೋರಿ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Share This Article