ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ (Bihar Elections) ಮುಹೂರ್ತ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ಎನ್‌ಡಿಎ (NDA) ಮತ್ತು ಇಂಡಿಯಾ ಒಕ್ಕೂಟದಲ್ಲಿ (INDIA Bloc) ಸೀಟು ಹಂಚಿಕೆ ಲೆಕ್ಕಚಾರ ಶುರುವಾಗಿದೆ. ಎಲ್ಲ ಪಕ್ಷಗಳು ಹೆಚ್ಚು ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿವೆ.
ಮೂಲಗಳ ಪ್ರಕಾರ ಎನ್‌ಡಿಎಯಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. 243 ಕ್ಷೇತ್ರಗಳ ಪೈಕಿ, 205 ಸ್ಥಾನಗಳು ಜೆಡಿಯು ಮತ್ತು ಬಿಜೆಪಿ ನಡುವೆ ಹಂಚಿಕೆಯಾಗಿದೆ. ಕೆಲವು ಸನ್ನಿವೇಶಗಳಲ್ಲಿ ಒಂದು ಪಕ್ಷವು ಇನ್ನೊಂದಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎನ್ನಲಾಗಿದೆ. ಇದನ್ನೂ ಓದಿ: Bihar Election Dates 2025 | ಬೂತ್ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಲು ಸಹಾಯವಾಣಿ
ಉಳಿದ 38 ಸ್ಥಾನಗಳನ್ನು ಎನ್‌ಡಿಎಯ ಸಣ್ಣ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ), ಹಿಂದೂಸ್ತಾನಿ ಅವಾಮ್ ಮೋರ್ಚಾ (ಹೆಚ್‌ಎಎಂ) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಂ) ನಡುವೆ ಹಂಚುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಬಿಜೆಪಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ 25 ಸ್ಥಾನಗಳು, ಹೆಚ್‌ಎಎಂ ನಾಯಕ ಜಿತನ್ ರಾಮ್ ಮಾಂಝಿಗೆ ಏಳು ಸ್ಥಾನಗಳು ಮತ್ತು ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂಗೆ ಆರು ಸ್ಥಾನಗಳನ್ನು ಪಡೆಯಬಹುದು.
ಚಿರಾಗ್ ಪಾಸ್ವಾನ್ ಅವರೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದ್ದು, ಎಲ್‌ಜೆಪಿ ನಾಯಕ ತಮ್ಮ ಪಕ್ಷದ ನಾಯಕರಿಗೆ ಆದ್ಯತೆಯ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಪಾಸ್ವಾನ್ ಅವರ ಸ್ಥಾನಗಳ ಪಾಲು ಹೆಚ್ಚಾದರೆ, ಅದು ಮಾಂಝಿ ಮತ್ತು ಕುಶ್ವಾಹ ಅವರಿಗೆ ಹಂಚಿಕೆಯಲ್ಲಿ ಕಡಿತಕ್ಕೆ ಕಾರಣವಾಗಬಹುದು. ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ – ನ.6, 11ರಂದು ಮತದಾನ, ನ.14ಕ್ಕೆ ಫಲಿತಾಂಶ
ಇಂಡಿಯಾ ಒಕ್ಕೂಟದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆರ್‌ಜೆಡಿಗೆ 125, ಕಾಂಗ್ರೆಸ್‌ಗೆ 55 ರಿಂದ 57 ಸ್ಥಾನಗಳಲ್ಲಿ ಸ್ಪರ್ಧೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಡ ಪಕ್ಷಗಳು 35, ಮುಖೇಶ್ ಸಾಹ್ನಿ ಅವರ ವಿಐಪಿ ಪಕ್ಷಕ್ಕೆ 20 ಸ್ಥಾನಗಳಲ್ಲಿ, ಪಶುಪತಿ ಪರಾಸ್‌ಗೆ ಮೂರು ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ಗೆ ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ. ಈಗಾಗಲೇ ನಾಯಕರ ನಡುವೆ ಮಾತುಕತೆ ನಡೆದಿದ್ದು, ಬಹುತೇಕ ನಾಯಕರ ಸಮ್ಮತಿ ಸಿಕ್ಕಿದ್ದರೂ, ಕಾಂಗ್ರೆಸ್ ಸೀಟುಗಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ನಾಳೆ ಕಾಂಗ್ರೆಸ್ ಮೊದಲ ಸಿಇಸಿ ಸಭೆ ನಡೆಸುತ್ತಿದ್ದು, ಸುಮಾರು 30 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.
ಬಿಹಾರ ವಿಧಾನಸಭೆಗೆ ಸೋಮವಾರ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 6 ರಂದು ಮೊದಲ ಹಂತ, ನವೆಂಬರ್ 11 ರಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ನವೆಂಬರ್ 14 ರಂದು ಮತ ಎಣಿಕೆಯಾಗಲಿದೆ. ಇದನ್ನೂ ಓದಿ: Bihar Election Dates 2025 | 69 ಲಕ್ಷ ಹೆಸರುಗಳು ಡಿಲೀಟ್, 21 ಲಕ್ಷ ಹೊಸ ಮತದಾರರ ಸೇರ್ಪಡೆ