ಡೈರಿಯಲ್ಲಿ ಅವ್ಯವಹಾರ ಆರೋಪ –  ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದು ಗ್ರಾಮಸ್ಥರ ಪ್ರತಿಭಟನೆ

Public TV
1 Min Read

ಮಂಡ್ಯ: ಹಾಲು ಉತ್ಪಾದಕರ (Milk Dairy) ಮಹಿಳಾ ಸಹಕಾರ ಸಂಘದಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಡೈರಿ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯ ಮನೆಯ ಮುಂದೆ ಹಾಲು ಸುರಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ (KR Pete) ತಾಲೂಕಿನ ಐಕನಹಳ್ಳಿಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಷೇರುದಾರರಿಗೆ ಹಾಗೂ ಹಾಲು ಉತ್ಪಾದಕರಿಗೆ ಅನ್ಯಾಯವಾಗುತ್ತಿದೆ. ಇದರ ಜೊತೆಗೆ ಸಂಘದ ಆರ್ಥಿಕ ಸ್ಥಿತಿಗೂ ಹೊಡೆತ ಬಿದ್ದಿದೆ. ಈ ಬಗ್ಗೆ ಕ್ರಮವಹಿಸಬೇಕೆಂದು ಇಲ್ಲಿನ ಗ್ರಾಮಸ್ಥರು ಹಲವು ತಿಂಗಳುಗಳಿಂದ ಆರೋಪ ಮಾಡುತ್ತಿದ್ದರು. ಆದರೂ ಈ ಬಗ್ಗೆ ಸೂಕ್ತ ಕ್ರಮವಾಗದ ಕಾರಣ ಗ್ರಾಮಸ್ಥರು ಅಧ್ಯಕ್ಷೆ ರಾಧಾ, ಕಾರ್ಯದರ್ಶಿ ಯಶೋಧಾ ಮನೆ ಮುಂದೆ ಹಾಲು ಸುರಿದು ಪ್ರತಿಭಟನೆ ಮಾಡಿದ್ದಾರೆ.ಇದನ್ನೂ ಓದಿ: ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್‌ ಕಿಶೋರ್‌

ಸಂಘದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆದು, ಭ್ರಷ್ಟಾಚಾರ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಸಂಘದಿಂದ ದುರುಪಯೋಗವಾಗಿರುವ ಹಣವನ್ನು ಮತ್ತೆ ಸಂಘಕ್ಕೆ ಕೊಡಿಸುವ ಕೆಲಸವಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article