ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

Public TV
2 Min Read

– CJI ಗವಾಯಿ ಜೊತೆ ಮಾತನಾಡಿದ ಪ್ರಧಾನಿ

ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ (BR Gavai) ಮೇಲೆ ವಕೀಲರೊಬ್ಬರು ಶೂ ಎಸೆದ ಆಘಾತಕಾರಿ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಕೋರ್ಟ್ ಹಾಲ್-1ರಲ್ಲಿ ವಿಚಾರಣೆಯ ವೇಳೆ 71 ವರ್ಷದ ವಕೀಲ ಕಿಶೋರ್ ರಾಕೇಶ್ ಎಂಬುವವರು ಶೂ ಎಸೆದಿದ್ದಾರೆ. ಘಟನೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಜೆಐ ಗವಾಯಿ ಅವರೊಂದಿಗೆ ಪ್ರಧಾನಿ ಮೋದಿ (PM Modi) ಮಾತನಾಡಿದ್ದಾರೆ. ಘಟನೆ ಬಗ್ಗೆ ತಿಳಿದುಕೊಂಡಿದ್ದಾರೆ. ಬಳಿಕ ಎಕ್ಸ್‌ ಪೋಸ್ಟ್‌ನಲ್ಲಿ ಸಂದೇಶವೊಂದನ್ನ ಹಂಚಿಕೊಂಡಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಮೋದಿ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಜಿ ಅವರೊಂದಿಗೆ ಮಾತನಾಡಿದೆ. ಇಂದು ಮುಂಜಾನೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅವರ ಮೇಲೆ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಸ್ಥಳವಿಲ್ಲ. ಇದು ಸಂಪೂರ್ಣವಾಗಿ ಖಂಡನೀಯ. ಅಲ್ಲದೇ ಇಂತಹ ಪರಿಸ್ಥಿತಿಯನ್ನು ಎದುರಿಸುವಾಗ ನ್ಯಾಯಮೂರ್ತಿ ಗವಾಯಿ ಅವರು ಪ್ರದರ್ಶಿಸಿದ ಶಾಂತಿಯುತ ನಡೆಯನ್ನ ನಾನು ಮೆಚ್ಚುತ್ತೇನೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಚೈತನ್ಯ ಬಲಪಡಿಸುವ ನಿಟ್ಟಿನಲ್ಲಿ ಅವರ ಬದ್ಧತೆಯನ್ನು ಎತ್ತಿ ತೋರಿಸುದೆ ಎಂದು ಬರೆದುಕೊಂಡಿದ್ದಾರೆ.

ಕೋರ್ಟ್‌ ಹಾಲ್‌ನಲ್ಲಿ ಏನಾಯ್ತು?
ಗವಾಯಿ ಅವರು ವಕೀಲರಿಂದ ಪ್ರಕರಣಗಳ ಉಲ್ಲೇಖವನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಆರೋಪಿ ವಕೀಲ ಪೀಠದ ಬಳಿಗೆ ತೆರಳಿ, ತನ್ನ ಶೂವನ್ನು ನ್ಯಾಯಮೂರ್ತಿಯವರ ಮೇಲೆ ಎಸೆಯಲು ಯತ್ನಿಸಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ, ವಕೀಲನನ್ನು ಹೊರಗೆ ಕರೆದೊಯ್ದಿದ್ದಾರೆ. ಈ ವೇಳೆ, `ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ’ ಅಂತ ವಕೀಲ ಕೂಗಿದ್ದಾನೆ. ಈ ಆಘಾತಕಾರಿ ಬೆಳವಣಿಗೆಯ ಹೊರತಾಗಿಯೂ ಸಿಜೆಐ ಗವಾಯಿ ತಾಳ್ಮೆ ವಹಿಸಿದ್ದರು. ಘಟನೆಯಿಂದ `ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’ ಅಂತ ಕೋರ್ಟ್‌ನಲ್ಲಿದ್ದ ವಕೀಲರಿಗೆ ವಾದ ಮುಂದುವರಿಸಲು ಸೂಚಿಸಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ ಆರೋಪಿ ವಕೀಲ ಕಿಶೋರ್ ರಾಕೇಶ್‌ನನ್ನು ಭದ್ರತಾ ಸಿಬ್ಬಂದಿ ಸುಪ್ರೀಂ ಕೋರ್ಟ್‌ನ ಭದ್ರತಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ವಕೀಲ ಕಿಶೋರ್ ಮಯೂರ್ ವಿಹಾರ್ ಪ್ರದೇಶದ ನಿವಾಸಿ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನೋಂದಾಯಿತ ಸದಸ್ಯರಾಗಿದ್ದಾರೆ. ಘಟನೆ ಬೆನ್ನಲ್ಲೇ ದೇಶಾದ್ಯಂತ ಯಾವುದೇ ವಕೀಲಿಕೆ ಮಾಡದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಾಕೇಶ್ ಕಿಶೋರ್ ಅವರನ್ನು ಸಸ್ಪೆಂಡ್ ಮಾಡಿದೆ.

ಈ ಮಧ್ಯೆ, ಸಿಜೆ ಮೇಲೆ ಶೂ ಎಸೆದ ಪ್ರಕರಣವನ್ನ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಬಿ.ಎಸ್ ಗವಾಯಿ ಮೇಲೆ ಶೂ ಎಸೆದ ಕಿಡಿಗೇಡಿ ವಕೀಲನನ್ನ ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಎಕ್ಸ್‌ನಲ್ಲಿ ಒತ್ತಾಯಿಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಕಿಡಿಕಾರಿದ್ದಾರೆ.

Share This Article