-ಅ.8ಕ್ಕೆ ಚಾಮುಂಡಿಬೆಟ್ಟದ ದೇವಿ ಕೆರೆಯಲ್ಲಿ ತೆಪ್ಪೋತ್ಸವ
ಮೈಸೂರು: ದಸರಾ ಮುಗಿದ ನಾಲ್ಕು ದಿನದಲ್ಲಿಯೇ ನಾಡಿನ ಅಧಿದೇವತೆ, ಚಾಮುಂಡಿಬೆಟ್ಟದಲ್ಲಿ (Chamundi Hills) ನೆಲೆಸಿರುವ ಶ್ರೀ ಚಾಮುಂಡೇಶ್ವರಿ ರಥೋತ್ಸವ ಇಂದು (ಅ.6) ವೈಭವದಿಂದ ನೆರವೇರಿತು. ಕರ್ನಾಟಕದ ವಿವಿಧೆಡೆಯಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ನೆರವೇರಿದ ಚಾಮುಂಡೇಶ್ವರಿ ದೇವಿಯ ರಥೋತ್ಸವದಲ್ಲಿ ಭಕ್ತಿ ಭಾವ ಮೇಳೈಸಿತ್ತು.
ಬೃಹದಾಕಾರದ ರಥಕ್ಕೆ ವಿವಿಧ ಬಣ್ಣದ ಬಾವುಟಗಳನ್ನು ಕಟ್ಟಲಾಗಿತ್ತು. ಜೊತೆಗೆ ವಿವಿಧ ಬಗೆಯ ಹೂವುಗಳು, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಗೆ ಚಿನ್ನ, ವಜ್ರ ವೈಢೂರ್ಯದ ಆಭರಣಗಳನ್ನು ಹಾಕಿ, ವಿಶೇಷ ಅಲಂಕಾರ ಮಾಡಲಾಗಿತ್ತು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಸರ್ವಾಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರು ಮಹಾಮಂಗಳಾರತಿ ಮಾಡಿದ ಬಳಿಕ ರಥೋತ್ಸವ ಆರಂಭವಾಯಿತು. ಬೆಳಗ್ಗೆ 9:55ರ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಇದನ್ನೂ ಓದಿ: ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ
ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಬೃಹತ್ ರಥ ದೇಗುಲವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿತು. ಸುಮಾರು ಒಂದು ಗಂಟೆ ಕಾಲ ಕ್ರಮಿಸಿದ ಬೃಹತ್ ರಥ ಬೆಳಗ್ಗೆ 11 ಗಂಟೆ ಸುಮಾರಿಗೆ ಸ್ವಸ್ಥಾನಕ್ಕೆ ಬಂದು ತಲುಪಿತು. ರಥೋತ್ಸವ ಸಾಗಿದೆಡೆಯಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ರಥದ ಮೇಲೆ ಹಣ್ಣು, ಜವನ ಎಸೆದು ಹರಕೆ ತೀರಿಸಿದ ಭಕ್ತರು, ಜೈ ಚಾಮುಂಡಿ, ಉಘೇ ಉಘೇ ಚಾಮುಂಡಿ ಎಂದು ಘೋಷಣೆ ಕೂಗಿ ಭಕ್ತಿಭಾವ ತೋರಿದರು. ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಅತ್ಯಂತ ವೈಭವದಿಂದ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ನೆರವೇರಿತು.
ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರುಗು ತಂದವು. ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಸಿಡಿಮದ್ದುಗಳನ್ನು ಸಿಡಿಸಿದರು. ಚಾಮುಂಡೇಶ್ವರಿ ರಥೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಹಾಗೂ ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ್ ಒಡೆಯರ್, ತ್ರಿಷಿಕಾ ಕುಮಾರಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಪತ್ನಿ ಲಲಿತಾ ದೇವೇಗೌಡ ಹಾಗೂ ಮಕ್ಕಳು ರಥೋತ್ಸವದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿ ದೇವಿ ಮೈಸೂರು ಅರಸರ ಕುಲದೇವತೆಯಾಗಿರುವ ಕಾರಣ ರಥೋತ್ಸವ ಆರಂಭದ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರಿನಲ್ಲಿ ಅರ್ಚನೆ ಮಾಡಲಾಯಿತು. ಯದುವಂಶದವರು ತಾಯಿಗೆ ಮೊದಲ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಶುರುವಾಯಿತು. ಇದೇ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬುಧವಾರ ಸಂಜೆ ಚಾಮುಂಡಿಬೆಟ್ಟದ ದೇವಿ ಕೆರೆಯಲ್ಲಿ ಅಮ್ಮನವರ ತೆಪ್ಪೋತ್ಸವ ನಡೆಯಲಿದೆ. ಅದರೊಂದಿಗೆ ಈ ವರ್ಷದ ದಸರಾ ಧಾರ್ಮಿಕ ಚಟುವಟಿಕೆಗಳಿಗೆ ಚಾಮುಂಡಿಬೆಟ್ಟದಲ್ಲಿ ತೆರೆ ಬೀಳಲಿದೆ.ಇದನ್ನೂ ಓದಿ: ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಮುಂದಿನ ಸಾರಥಿ ಯಾರು?