ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ (Koppal) ಲೋಕಸಭಾ ಸಂಸದ ರಾಜಶೇಖರ ಹಿಟ್ನಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಯಲಬುರ್ಗಾ ಕ್ಷೇತ್ರದ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಗೆದ್ದ ಎಲ್ಲಾ ಕಾಂಗ್ರೆಸ್ (Congress) ಜನಪ್ರತಿನಿಧಿಗಳು ಮೋಸಗಾರರು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಾಂಬ್ ಸಿಡಿಸಿದ್ದಾರೆ.
ಅ.6ರಂದು ಕೊಪ್ಪಳ ಜಿಲ್ಲೆಯಲ್ಲಿ 2,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆಗಮಿಸುತ್ತಿರುವ ಬೆನ್ನೆಲ್ಲೇ ಅ.5ರಂದು ಆಡಿಯೋ ಬಿಡುಗಡೆ ಮಾಡಿ, ಜಿಲ್ಲೆಯ ಜನತೆಗೆ ಕೊಪ್ಪಳದ ಕಾಂಗ್ರೆಸ್ ಜನಪ್ರತಿನಿಧಿಗಳ ಬಣ್ಣಬಯಲು ಮಾಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಿಡಿತ ಹೊಂದಿರುವ ತಂಗಡಗಿ, ಹಿಟ್ನಾಳ್ ಕುಟುಂಬ ಮತ್ತು ರಾಯರೆಡ್ಡಿ ವಿರುದ್ಧ ಅನ್ಸಾರಿ ಧ್ವನಿ ಎತ್ತಿದ್ದಾರೆ. ಆಡಿಯೋ ಮೂಲಕ ತಮ್ಮ ಮುಸ್ಲಿಂ ಸಮಾಜಕ್ಕೆ ಮತ್ತು ಬೆಂಬಲಿಗರಿಗೆ ಸಂದೇಶ ರವಾನಿಸಿದ್ದು, ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.ಇದನ್ನೂ ಓದಿ: ಕ್ರಿಕೆಟ್ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ
ಆಡಿಯೋದಲ್ಲಿ, ಅ.6ರಂದು ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬರುತ್ತಿರುವ ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಪ್ರತಿಯೊಂದು ಗ್ರಾಮದ ಫಲಾನುಭವಿಗಳನ್ನು ನಮ್ಮ ಬೆಂಬಲಿಗ ಕಾರ್ಯಕರ್ತರು ಕರೆದುಕೊಂಡು ಹೋಗಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಅತ್ಯುತ್ತಮ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಇದನ್ನು ನಾವೆಲ್ಲರೂ ತುಂಬು ಹೃದಯದಿಂದ ಸ್ವಾಗತಿಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ಕೊಪ್ಪಳ ಜಿಲ್ಲೆಯ ಸಚಿವ, ಸಂಸದ, ಶಾಸಕ ಮತ್ತು ಆರ್ಥಿಕ ಸಲಹೆಗಾರ ಮಾಡಿರುವ ಮೋಸವನ್ನು ಸಹಿಸುವುದಿಲ್ಲ. ಅವರು ನನ್ನ ಬಗ್ಗೆ ಮುಖ್ಯಮಂತ್ರಿ ಬಳಿ ಸುಳ್ಳಿನ ಕತೆ ಹೆಣೆಯುತ್ತಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ್ ಪರ ಚುನಾವಣೆಯಲ್ಲಿ ಕೆಲಸ ಮಾಡುವ ಮನಸ್ಸು ನನಗೆ ಇರಲಿಲ್ಲ. ಆದರೆ ಮುಖ್ಯಮಂತ್ರಿಯವರ ಮಾತಿಗೆ ನಾನು ಬೆಲೆಕೊಟ್ಟು ಗಂಗಾವತಿಯಲ್ಲಿ 16 ಸಾವಿರ ಮತಗಳ ಲೀಡ್ ಆಗುವಂತೆ ಕೆಲಸ ಮಾಡಿದ್ದೇನೆ. ಆದರೆ ಗೆದ್ದ ನಂತರ ಹಿಟ್ನಾಳ್ ಸಹೋದರರು, ಸಚಿವ ಹಾಗೂ ರಾಯರೆಡ್ಡಿ ಸಿಎಂ ಮುಂದೆ ನನ್ನ ವಿರುದ್ಧ ಕ್ಯಾಸೆಟ್ ಹಾಕುತ್ತಾರೆ. ಗಂಗಾವತಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿಗೆ ಬೆಂಬಲಿಸಿ ನನ್ನ ವಿರುದ್ಧ ಮಸಲತ್ತು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಂದಿನ ದಿನಗಳಲ್ಲಿ ಇವರ ಕುತುಂತ್ರದ ಬಣ್ಣ ಬಯಲು ಮಾಡಲು ನಾನು ಸಿದ್ಧನಿದ್ದೇನೆ. ಮುಂದಿನ ದಿನಗಳಲ್ಲಿ ಕೇವಲ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅಲ್ಲ, ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಮತ್ತು ಮುಸ್ಲಿಂ ಸಮಾಜಕ್ಕೆ ಹಿಟ್ನಾಳ್ ಕುಟುಂಬ, ತಂಗಡಗಿ ಮತ್ತು ರಾಯರೆಡ್ಡಿ ಮಾಡಿರುವ ಮೋಸವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಇಂದು ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜನತೆ ಮತ್ತು ಫಲಾನನುಭವಿಗಳು ಹೋಗಿಬನ್ನಿ. ಆದರೆ ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಯಾವತ್ತು ನಂಬಬೇಡಿ ಶಾಸಕ ಹಿಟ್ನಾಳ್ ಸಹೋದರರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ ವಿರುದ್ಧ ಏಕವಚನದಲ್ಲಿ ಆಕ್ರೊಶ ಹೊರಹಾಕಿದ್ದಾರೆ. ಈ ಆಡಿಯೋ ಇಂದು ಕೊಪ್ಪಳದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾಗಿದೆ.ಇದನ್ನೂ ಓದಿ: ದಸರೆಗೆ ಊರಿಗೆ ಹೋದವರು ವಾಪಸ್ – ಬೆಳಗ್ಗೆ ಅರ್ಧಗಂಟೆ ಬಂದ್ ಆಗಿತ್ತು ಯಶವಂತಪುರ ಮೆಟ್ರೋ ನಿಲ್ದಾಣ