ಮಧ್ಯಪ್ರದೇಶ ಸಿರಪ್ ದುರಂತ; ನಮ್ಮ ರಾಜ್ಯದಲ್ಲಿ ಈ ಸಿರಪ್ ಸರಬರಾಜು ಆಗಿಲ್ಲ: ದಿನೇಶ್ ಗುಂಡೂರಾವ್

Public TV
3 Min Read

– ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು

ಹಾಸನ: ಮಧ್ಯಪ್ರದೇಶ ಸಿರಪ್ ದುರಂತ (Madhya Pradesh Cough Syrup Row) ಪ್ರಕರಣದ ಬಳಿಕ ನಮ್ಮ ರಾಜ್ಯದಲ್ಲಿ ಕೂಡ ಈ ಬಗ್ಗೆ ಕ್ರಮ ವಹಿಸಲಾಗಿದೆ. ಔಷಧ ಮಾದರಿ ಪರೀಕ್ಷೆಯಲ್ಲಿ ರಾಜ್ಯ ನಂಬರ್ ಒನ್ ಇದೆ. ಈ ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹುಟ್ಟುಹಬ್ಬ ಹಿನ್ನೆಲೆ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಧ್ಯಪ್ರದೇಶದ ಘಟನೆ ಅತ್ಯಂತ ಆಘಾತಕಾರಿ. ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಈ ಬಗ್ಗೆ ಒಂದು ಮಾರ್ಗಸೂಚಿ ಕೂಡ ಬಿಡುಗಡೆ ಮಾಡುತ್ತೇವೆ. ಈ ಹಿಂದೆ ಆರೋಗ್ಯ ಸುರಕ್ಷತೆ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲಾಗಿದೆ. ಮಿನರಲ್ ವಾಟರ್ ತಯಾರಿಗೆ ಸಂಬಂಧ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸಂಜೆ ಬಿಹಾರ ಚುನಾವಣೆಗೆ ದಿನಾಂಕ ಪ್ರಕಟ

ಕರ್ನಾಟಕದಲ್ಲೂ ಎರಡು ಸಿರಪ್ ಪತ್ತೆ ಪ್ರಕರಣ ಕುರಿತು ಮಾತನಾಡಿ, ನಮ್ಮ ಇಲಾಖೆಯಿಂದ ಇಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತಾರೆ. ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸುತ್ತಾರೆ. ಇದೇ ತರಹ ಬೇರೆ ಕಂಪನಿಗಳು ಕಾಫ್ ಸಿರಪ್ ತಯಾರಿಕೆ ಮಾಡಿದರೆ ಅದರ ಮಾದರಿ ಸಂಗ್ರಹಣೆ ಮಾಡಿ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಒಂದೆರಡು ದಿನದಲ್ಲಿ ಅದರ ರಿಪೋರ್ಟ್ ಬರುತ್ತದೆ, ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು. ಇದನ್ನೂ ಓದಿ: ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

ನಾವು ಬಂದ ಮೇಲೆ ನಮ್ಮ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ. ಸಾಕಷ್ಟು ತಪಾಸಣೆ ಮಾಡಿಸುತ್ತಿದ್ದೇವೆ. ಕರ್ನಾಟಕ ಈಗ ಬಹಳ ಮುಂಚೂಣಿಯಲ್ಲಿದೆ. ಔಷಧ ವಿಚಾರದಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ತಯಾರಿಕೆ ಮಾಡುವವರು ಒಂದು ಕಡೆ ಇರುತ್ತಾರೆ, ಸರಬರಾಜು ಮಾಡುವವರು ಮತ್ತೊಂದು ಕಡೆ ಇರುತ್ತಾರೆ. ಕರ್ನಾಟಕದಲ್ಲಿ ಮಾದರಿ ಸರಿ ಇಲ್ಲ ಎಂದು ಗೊತ್ತಾದಾಗ ಇಡೀ ದೇಶಕ್ಕೆ ಗೊತ್ತಾಗಬೇಕು. ಈ ಕಾಫ್ ಸಿರಪ್ ನಮ್ಮಲ್ಲಿ ಎಲ್ಲೂ ಸರಬರಾಜು ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದಸರೆಗೆ ಊರಿಗೆ ಹೋದವರು ವಾಪಸ್ – ಬೆಳಗ್ಗೆ ಅರ್ಧಗಂಟೆ ಬಂದ್ ಆಗಿತ್ತು ಯಶವಂತಪುರ ಮೆಟ್ರೋ ನಿಲ್ದಾಣ

ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ಒರಿಸ್ಸಾದಲ್ಲಿ ಉಪಯೋಗ ಮಾಡಿದ್ದಾರೆ. ತಯಾರಿಕಾ ಘಟಕಗಳ ಬೇಜವಾಬ್ದಾರಿ ಇದೆ. ಡೈ ಎಥಿಲಿನ್, ಗ್ಲೈಕಾಲ್ ಅನ್ನು ಉಪಯೋಗಿಸಿದ್ದಾರೆ. ಮಕ್ಕಳಿಗೆ ಸಿರಪ್ ಕೊಡುವಾಗ ಎಚ್ಚರಿಕೆ ವಹಿಸಬೇಕು. ಐದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಯಾವುದೇ ಕಾಫ್ ಸಿರಪ್ ಕೊಡುವಾಗ ಎಚ್ಚರ ಇರಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ, ಮೊದಲು ಬೆಂಗಳೂರಿನ ಗುಂಡಿ ಮುಚ್ಚಿ, ಬಳಿಕ ನಮ್ಮ ಮೆಟ್ರೋ ಹೆಸರು ಬದಲಾಯಿಸಿ

ಇನ್ನು ಹೊರ ರಾಜ್ಯದಲ್ಲಿ ಸಿರಪ್ ಸೇವನೆಯಿಂದ ಮಕ್ಕಳು ಸಾವನ್ನಪ್ಪಿದ ಬಳಿಕ ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಮಕ್ಕಳ ಸಿರಪ್ ಬಳಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆಗೆ ನಿರ್ಧರಿಸಿದೆ. ಇಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಾಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪೋಷಕರು, ಖಾಸಗಿ ಆಸ್ಪತ್ರೆ ಮತ್ತು ವೈದ್ಯರು ಮಕ್ಕಳ ಸಿರಪ್ ಬಳಕೆಗೆ ಸಂಬಂಧಿಸಿದಂತೆ ಯಾವ ರೀತಿ ಮಾರ್ಗಸೂಚಿಯನ್ನ ಅನುಸರಿಸಬೇಕು ಎಂದು ನಿರ್ಧಾರ ಆಗಲಿದೆ. ಇದನ್ನೂ ಓದಿ: Darjeeling Flood | ರಣಭೀಕರ ಮಳೆಗೆ ಭೂಕುಸಿತ – ಸಾವಿನ ಸಂಖ್ಯೆ 23ಕ್ಕೆ ಏರಿಕೆ

Share This Article