ಚಿಕ್ಕೋಡಿ: 2019ರಲ್ಲಿ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ (Kudachi Police Station) ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತು ಆಕೆಯ ಮೇಲೆ ನಡೆದ ಕ್ರೌರ್ಯತೆ ನೆನೆದು ಗ್ರಾಮಸ್ಥರ ಮುಂದೆ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ (PSI) ಗಿರಿಮಲ್ಲಪ್ಪ ಉಪ್ಪಾರ ಅವರು ಕಣ್ಣೀರು ಹಾಕಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಇತ್ತೀಚೆಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, 10 ಲಕ್ಷ ರೂಪಾಯಿ ದಂಡ ಕಟ್ಟುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತ್ರಸ್ತೆಯ ಗ್ರಾಮದಲ್ಲಿ ಶುಕ್ರವಾರ ಸಂಜೆ ‘ಶಿಕ್ಷೆಗೆ ಸಂಭ್ರಮ, ಮಿಡಿದ ಮನಗಳ ಸಂಗಮ’ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದೇ ವೇಳೆ ಗ್ರಾಮಸ್ಥರೆಲ್ಲರೂ ರಸ್ತೆಯಲ್ಲಿ ಮೊಂಬತ್ತಿ ಹಿಡಿದು ಸಾಗುವ ಮೂಲಕ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದರು. ಇದನ್ನೂ ಓದಿ: Darjeeling Flood | 24/7 ಕಂಟ್ರೋಲ್ ರೂಮ್ ಓಪನ್ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ
ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ವೇದಿಕೆಯಲ್ಲಿ ಮಾತನಾಡುವ ವೇಳೆ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಆರೋಪಿಯ ಕ್ರೂರತನ ನೆನೆದು ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತರು. ಆವತ್ತು ನಡೆದ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ವಿವರಿಸಿದರು. ಅಂದು ಪ್ರಕರಣದ ತನಿಖಾಧಿಕಾರಿಯಾಗಿದ್ದ ಗಿರಿಮಲ್ಲಪ್ಪ ಉಪ್ಪಾರ ಸದ್ಯ ಅಥಣಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ನಾಸಾ ಬಾಹ್ಯಾಕಾಶ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ, ಯುಟಿ ಖಾದರ್
2019ರ ಸೆಪ್ಟೆಂಬರ್ 10ರಂದು ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಭರತೇಶ ಮಿರ್ಜಿ ಎಂಬಾತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಮನೆಯಿಂದ ಚಾಕೊಲೇಟ್ ತರಲು ಹೊರಟ ಬಾಲಕಿಯನ್ನು ದಾರಿ ಮಧ್ಯದಲ್ಲಿ ತಡೆದ ಭರತೇಶ ಚಾಕೊಲೇಟ್ ಕೊಡುತ್ತೇನೆ ಬಾ ಎಂದು ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದ. ಬಳಿಕ ಯಾರಿಗೂ ಸಂಶಯಬಾರದ ರೀತಿಯಲ್ಲಿ ಬಾಲಕಿಯ ಸೊಂಟಕ್ಕೆ ಕಲ್ಲು ಕಟ್ಟಿ ಪಕ್ಕದ ಬಾವಿಗೆ ಎಸೆದು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ದೃಢವಾಗಿತ್ತು.
ಈ ಬಗ್ಗೆ ಬೆಳಗಾವಿ ಹೆಚ್ಚುವರಿ ನ್ಯಾಯಾಲಯ ಸುದೀರ್ಘವಾಗಿ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶರಾದ ಸಿ.ಎಂ ಪುಷ್ಪಲತಾ ಅವರು ಈ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕರಾದ ಎಲ್.ವಿ ಪಾಟೀಲ ವಾದ ಮಂಡಿಸಿದ್ದರು. ಇದನ್ನೂ ಓದಿ: ಹೊಳೆನರಸೀಪುರ | ಜಾತಿಗಣತಿಗೆ ತೆರಳುವಾಗ ನಾಯಿಗೆ ಸ್ಕೂಟರ್ ಡಿಕ್ಕಿ – ಶಿಕ್ಷಕಿಗೆ ಗಂಭೀರ ಗಾಯ