ಜಾತಿಗಣತಿಗೆ ತರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳ ದಾಳಿ – ರಕ್ಷಣೆಗೆ ಬಂದ 7 ಮಂದಿಗೂ ಕಚ್ಚಿದ ಶ್ವಾನಗಳು

Public TV
2 Min Read
  • ಮೂರು ಮಂದಿಗೆ ಗಂಭೀರ ಗಾಯ

ಹಾಸನ: ಜಾತಿಗಣತಿಗೆ (Caste census) ತೆರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳು ದಾಳಿ (Stray Dog Attack) ನಡೆಸಿ ಮುಖ, ಕೈ-ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಬೇಲೂರಿನ (Beluru) ಜೈಭೀಮ್ ನಗರದಲ್ಲಿ ನಡೆದಿದೆ. ಈ ವೇಳೆ ಶಿಕ್ಷಕಿಯನ್ನು ಬಚಾವ್‌ ಮಾಡಲು ಬಂದ ಪತಿ ಸೇರಿದಂತೆ 7 ಮಂದಿಯನ್ನು ನಾಯಿಗಳು ಕಚ್ಚಿವೆ.

ಬೀದಿನಾಯಿಗಳ ದಾಳಿಯಿಂದ ಗಾಯಕ್ಕೊಳಗಾದ ಶಿಕ್ಷಕಿಯನ್ನು ಪಟ್ಟಣದ ಜಿಎಚ್‍ಪಿಎಸ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಮ್ಮ ಎಂದು ಗುರುತಿಸಲಾಗಿದೆ. ನಾಯಿಗಳು ದಾಳಿ ಮಾಡಿದ ವೇಳೆ ಅಲ್ಲೇ ಇದ್ದ ಪತಿ ಶಿವಕುಮಾರ್‌ ಹಾಗೂ ಸ್ಥಳಿಯ ಯುವಕರಾದ ಧರ್ಮ, ಪೃಥ್ವಿ, ಸಚಿನ್ ಸೇರಿದಂತೆ ಎಳು ಜನ ಶಿಕ್ಷಕಿಯನ್ನು ಬಚಾವ್‌ ಮಾಡಲು ಯತ್ನಿಸಿದ್ದಾರೆ. ರಕ್ಷಣೆಗೆ ಯತ್ನಿಸಿದ 7 ಮಂದಿಗೂ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಅಲ್ಲದೇ ಅಲ್ಲೇ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಕಿಶನ್ ಎಂಬಾತನ ಮೇಲೂ ನಾಯಿಗಳು ದಾಳಿ ನಡೆಸಿವೆ. ಇದನ್ನೂ ಓದಿ: ಉತ್ತರ ಪ್ರದೇಶ | ಎರಡು ಬಾರಿ ಕಚ್ಚಿದ್ರೆ ಬೀದಿನಾಯಿಗೆ ಜೀವಾವಧಿ ಶಿಕ್ಷೆ!

ಚಿಕ್ಕಮ್ಮ ಅವರಿಗೆ ನೀಡಿದ್ದ ಸಮೀಕ್ಷೆ ಮುಗಿಸಲು ಇಂದು ಕಡೆಯ ದಿನವಾಗಿತ್ತು. ಬಾಕಿಯಿದ್ದ ಮೂರು ಮನೆ ಸಮೀಕ್ಷೆ ನಡೆಸಲು ಅವರು ಪತಿ ಜೊತೆಗೆ ತೆರಳಿದ್ದರು. ಈ ವೇಳೆ ನಾಯಿಗಳು ದಾಳಿ ಮಾಡಿವೆ ಎಂದು ತಿಳಿದು ಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿ ಚಿಕ್ಕಮ್ಮ ಹಾಗೂ ಉಳಿದ ಗಾಯಾಳುಗಳಿಗೆ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಮೂರು ಜನರಿಗೆ ಹೆಚ್ಚು ಗಾಯಗಳಾಗಿದ್ದು, ಅವರನ್ನು ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುಗಳನ್ನು ಶಾಸಕ ಹೆಚ್.ಕೆ.ಸುರೇಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಶಿಕ್ಷಕರ ಮೇಲೆ ಒತ್ತಡ ಹಾಕುತ್ತಿದೆ. 300 ಮನೆಗಳನ್ನು ಟಾರ್ಗೆಟ್ ಕೊಟ್ಟಿದ್ದಾರೆ. ನೆಟ್‍ವರ್ಕ್ ಸಮಸ್ಯೆ ಇದೆ. ಗಲ್ಲಿ ಗಲ್ಲಿಗಳಲ್ಲಿ ಬೀದಿನಾಯಿಗಳ ಹಾವಳಿ ಇದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಇದೆ. ಜಾವಗಲ್ ಭಾಗದಲ್ಲಿ ಚಿರತೆ ಹಾವಳಿ ಇದೆ. ನಿರ್ದಿಷ್ಟ ಅವಧಿ ನಿಗದಿ ಮಾಡಿ ಶಿಕ್ಷಕರಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಸಮೀಕ್ಷೆ ಸ್ವಾರ್ಥಕ್ಕಾಗಿ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 21 ಮದುವೆಯಾಗಿಲ್ಲ, ನನ್ನಿಂದ್ಲೇ 17 ಲಕ್ಷ ಹಣ ವಸೂಲಿ ಮಾಡಿದ್ದಾರೆ: ಪತ್ನಿ ಆರೋಪ ಸುಳ್ಳೆಂದ ಪತಿ

Share This Article