ಪಂಜಾಬ್ (Punjab) ರಾಜ್ಯವು ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಜಾರ್ಖಂಡ್ನಿಂದ ಬರುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಇಲ್ಲಿ ಕೈಗಾರಿಕೆ, ಕೃಷಿ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ವಲಸೆ ಕಾರ್ಮಿಕರ ಅವಶ್ಯಕತೆ ಹೆಚ್ಚಿದೆ. ಆದರೆ ಇದೀಗ ಇದ್ದಕ್ಕಿದ್ದಂತೆ ಪಂಜಾಬ್ನಲ್ಲಿ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ (The Inter-State Migrant Workmen Act) ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಹೌದು, ಪಂಜಾಬ್ನ ಹೋಶಿಯಾರ್ಪುರದಲ್ಲಿ ಸೆಪ್ಟೆಂಬರ್ 9 ರಂದು 5 ವರ್ಷದ ಬಾಲಕನ ಮೃತದೇಹವು ಪತ್ತೆಯಾಗಿತ್ತು. ಬಾಲಕನ ದೇಹದ ಮೇಲೆ ಹಲವು ಗಾಯಗಳ ಗುರುತುಗಳಿದ್ದುದ್ದರಿಂದ ಇದನ್ನು ಕೊಲೆ ಎಂದು ಶಂಕಿಸಲಾಗಿತ್ತು. ಬಳಿಕ ಪೊಲೀಸರು ಹೋಶಿಯಾರ್ಪುರದ ಸಬ್ಜಿ ಮಂಡಿ ಪ್ರದೇಶ ಹಾಗೂ ಉತ್ತರ ಪ್ರದೇಶದಿಂದ ಬಂದ ವಲಸೆ ಕಾರ್ಮಿಕನನ್ನು ಈ ಪ್ರಕರಣದ ಆರೋಪಿಗಳೆಂದು ಬಂಧಿಸಿದರು. ಇದಾದ ಬಳಿಕ ತರುವಾಯ ಪಂಜಾಬ್ ವಲಸೆ ಕಾರ್ಮಿಕರ ವಿರುದ್ಧ ಭಾರೀ ಆಕ್ರೋಶದ ವ್ಯಕ್ತವಾಯಿತು. ಅಲ್ಲದೇ ವಲಸೆ ಕಾರ್ಮಿಕರು ಹಳ್ಳಿಗಳಲ್ಲಿ ಉಳಿಯಲು ಅನುಮತಿಯಿಲ್ಲ ಎಂದು ಅಲ್ಲಿನ ಪಂಚಾಯತ್ಗಳು ತೀರ್ಮಾನ ಕೈಗೊಂಡಿದೆ. ಹಾಗೆಯೇ ರೈತ ಸಂಘಗಳು, ಕೃಷಿ ಕಾರ್ಮಿಕ ಸಂಘಟನೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಕೂಡ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದವು. ಅಲ್ಲದೇ ಈಗಾಗಲೇ ಅಸ್ತಿತ್ವದಲ್ಲಿರುವ ಪಂಜಾಬ್ ಅಂತರ-ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ, 1979 ಅನ್ನು ಗಂಭೀರವಾಗಿ ಜಾರಿಗೆ ತರುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದೆ.
ಏನಿದು ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ?
ಅಂತರರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಪರಿಸ್ಥಿತಿಗಳು) ಕಾಯ್ದೆ, 1979 ಸಂಸತ್ತು ಜಾರಿಗೆ ತಂದ ಕೇಂದ್ರ ಶಾಸನವಾಗಿದ್ದು, ಸಾಮಾನ್ಯವಾಗಿ ಗುತ್ತಿಗೆದಾರರ ಮೂಲಕ ಉದ್ಯೋಗಕ್ಕಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವ ಕಾರ್ಮಿಕರಿಗಾಗಿ ಮಾಡಲಾಗಿದೆ. ಇದನ್ನು ಅಕ್ಟೋಬರ್ 2, 1980 ರಂದು ರಾಷ್ಟ್ರವ್ಯಾಪಿ ಜಾರಿಗೊಳಿಸಲು ಸೂಚಿಸಲಾಯಿತು.
ಈ ಕಾಯ್ದೆಯ ಉದ್ದೇಶವೆಂದರೆ ನೇಮಕಾತಿಯನ್ನು ನಿಯಂತ್ರಿಸುವುದು, ಸಂಸ್ಥೆಗಳು ಮತ್ತು ಗುತ್ತಿಗೆದಾರರ ನೋಂದಣಿಯನ್ನು ಖಚಿತಪಡಿಸುವುದಾಗಿದೆ. ಕಾರ್ಮಿಕರಿಗೆ ಸಮಾನ ವೇತನ, ಸ್ಥಳಾಂತರ ಭತ್ಯೆ, ಪ್ರಯಾಣ ಭತ್ಯೆ, ವಸತಿ, ವೈದ್ಯಕೀಯ ಸೌಲಭ್ಯಗಳು ಮತ್ತು ರಕ್ಷಣಾ ಉಡುಪುಗಳಂತಹ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುವುದಾಗಿದೆ.
ಪಂಜಾಬ್ಗೆ ಈ ಕಾಯ್ದೆ ಏಕೆ ಬೇಕು?
ಪಂಜಾಬ್ಗೆ ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಜಾರ್ಖಂಡ್ನಿಂದ ಬರುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರ ಆಗಮಿಸುತ್ತಾರೆ. 1970 ರ ದಶಕದ ಆರಂಭದಲ್ಲಿ ಹಸಿರು ಕ್ರಾಂತಿಯ ಆರಂಭದಿಂದ ವಲಸೆ ಕಾರ್ಮಿಕರ ಬರುವಿಕೆ ಹೆಚ್ಚಾಯಿತು. ಆರಂಭದಲ್ಲಿ ಭತ್ತ ಬಿತ್ತನೆಗಾಗಿ ಗ್ರಾಮೀಣ ಪಂಜಾಬ್ಗೆ ಬಂದ ನಂತರ, ವಲಸಿಗರು ಕ್ರಮೇಣ ಕಾರ್ಖಾನೆಗಳು ಮತ್ತು ಇತರ ಕೆಲಸ ಮಾಡಲು ಪ್ರಾರಂಭಿಸಿದರು.
2016 ರಲ್ಲಿ ಎಸ್ಎಡಿ-ಬಿಜೆಪಿ ಸರ್ಕಾರದ ಪರ್ವಾಸಿ ವಿಂಗ್ ನಡೆಸಿದ ಸಮೀಕ್ಷೆಯು ಪಂಜಾಬ್ನ ವಲಸೆ ಕಾರ್ಮಿಕರ ಸಂಖ್ಯೆಯನ್ನು 39 ಲಕ್ಷ ಎಂದು ಅಂದಾಜಿಸಿತ್ತು. ಲುಧಿಯಾನದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರಿದ್ದಾರೆ ಎಂದು ತಿಳಿದುಬಂದಿತ್ತು. ನಂತರ ಜಲಂಧರ್, ಅಮೃತಸರ, ಮೊಹಾಲಿ, ಬಟಿಂಡಾ, ಫಾಗ್ವಾರಾ ಮತ್ತು ಹೋಶಿಯಾರ್ಪುರ್ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಪತ್ತೆಯಾಗಿತ್ತು.
2020 ರಲ್ಲಿ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ, 18 ಲಕ್ಷ ವಲಸಿಗರು ತಮ್ಮ ಮನೆಗಳಿಗೆ ಮರಳಲು ಪಂಜಾಬ್ ಸರ್ಕಾರದಲ್ಲಿ ಸೂಚಿಸಿತ್ತು. ಇವರಲ್ಲಿ ಸುಮಾರು 10 ಲಕ್ಷ ಜನರು ಉತ್ತರ ಪ್ರದೇಶದವರು ಮತ್ತು 6 ಲಕ್ಷ ಜನರು ಬಿಹಾರದವರು ಎಂದು ಪಟ್ಟಿ ಮಾಡಿತ್ತು.
ಈ ಕಾಯ್ದೆ ವಲಸೆ ಕಾರ್ಮಿಕರಿಗೆ ಹೇಗೆ ಸಹಾಯ ಮಾಡುತ್ತದೆ?
ಕಾರ್ಮಿಕರನ್ನು ಶೋಷಣೆ ಮತ್ತು ಕಡಿಮೆ ವೇತನದಿಂದ ರಕ್ಷಿಸಲು ಮತ್ತು ದೊಡ್ಡ ಪ್ರಮಾಣದ ಕಾರ್ಮಿಕ ವಲಸೆಯ ಮೇಲೆ ಹೊಣೆಗಾರಿಕೆ ಮತ್ತು ಕಾನೂನು ಮೇಲ್ವಿಚಾರಣೆಯನ್ನು ಕಾಪಾಡಿಕೊಳ್ಳಲು ಈ ಕಾಯ್ದೆ ಅಗತ್ಯವಾಗಿತ್ತು.
ಪಂಜಾಬ್ನಲ್ಲಿ ಏಪ್ರಿಲ್ 1983 ರಲ್ಲಿ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ ಜಾರಿಗೆ ಬಂದಿತು. ಇದು ವಲಸೆ ಕಾರ್ಮಿಕರ ನೋಂದಣಿ, ದಾಖಲೆ ನಿರ್ವಹಣೆ ಮತ್ತು ರಾಜ್ಯದೊಳಗಿನ ಗುತ್ತಿಗೆದಾರರು ಮತ್ತು ಉದ್ಯೋಗದಾತರ ಕರ್ತವ್ಯಗಳಂತಹ ಪ್ರಾಯೋಗಿಕ ಕಾರ್ಯವಿಧಾನಗಳನ್ನು ಒಳಗೊಂಡಿದೆ.
ಕಾರ್ಯ ನಿರ್ವಹಿಸುವ ವಿಧಾನ
ಐದು ಅಥವಾ ಹೆಚ್ಚಿನ ಅಂತರರಾಜ್ಯ ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಯಾವುದೇ ಸಂಸ್ಥೆ ಅಥವಾ ಗುತ್ತಿಗೆದಾರರು ಪಂಜಾಬ್ ನಿಯಮಗಳ ಅಡಿಯಲ್ಲಿ ನೇಮಕಗೊಂಡ ನೋಂದಣಿ/ಪರವಾನಗಿ ಅಧಿಕಾರಿಯೊಂದಿಗೆ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮತ್ತು ಪರವಾನಗಿಯನ್ನು ಇ-ಲೇಬರ್ ಪಂಜಾಬ್ ಪೋರ್ಟಲ್ ಮೂಲಕ ನಡೆಸಲಾಗುತ್ತದೆ. ಅಲ್ಲಿ ಸಂಸ್ಥೆಯ ಹೆಸರು ಮತ್ತು ವಿಳಾಸ, ಕಾರ್ಮಿಕರ ಸಂಖ್ಯೆ, ಕೆಲಸದ ಸ್ವರೂಪ ಮತ್ತು ಗುತ್ತಿಗೆದಾರರ ವಿವರಗಳಂತಹ ವಿವರಗಳನ್ನು ಸಲ್ಲಿಸಬೇಕು.
ಗುತ್ತಿಗೆದಾರರು ಹಿಂದಿನ ಯಾವುದೇ ಅಪರಾಧ ನಿರ್ಣಯಗಳು, ಭದ್ರತಾ ಠೇವಣಿಗಳು ಮತ್ತು ಕಾರ್ಮಿಕ ಕಾನೂನುಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆಯನ್ನು ಆಧರಿಸಿ ನಾಮಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ. ಪರವಾನಿಗೆ ಪಡೆದವರು ರಾಜ್ಯದಲ್ಲಿ ಒಂದು ವರ್ಷ ಕೆಲಸ ಮಾಡಲು ಮಾನ್ಯತೆ ಪಡೆದಿರುತ್ತಾರೆ. ಅವಧಿ ಮುಗಿದ ನಂತರ ಪುನರ್ ನವೀಕರಣದ ಅಗತ್ಯವಿರುತ್ತದೆ.
ಈ ಕಾಯ್ದೆಯು ರಾಜ್ಯದಲ್ಲಿ ವಲಸೆ ಕಾರ್ಮಿಕ ವಿರೋಧಿ ನಡೆಗೆ ಹಾಗೂ ವಲಸೆ ಕಾರ್ಮಿಕರ ರಕ್ಷಣೆಗೆ ಹೆಚ್ಚು ಸಹಾಯಕವಾಗಿದೆ. ಈ ಹಿಂದೆಯೇ ಈ ಕಾಯ್ದೆ ಪಂಜಾಬ್ನಲ್ಲಿ ಜಾರಿಯಲ್ಲಿದ್ದುದ್ದರಿಂದ, ಇದೀಗ ಕಾಯ್ದೆಯಲ್ಲಿನ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವಂತೆ ಅಲ್ಲಿ ಜನರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.