ಬೆಂಗಳೂರು: ಎಲ್ಲಾ ಸಮಾಜದ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ.
ಜಿಬಿಎ (Greater Bengaluru Authority) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ಚಾಲನೆ ನೀಡಿದರು. ಬಳಿಕ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census Survey) ಆರಂಭವಾಗುತ್ತಿದ್ದು, ನನ್ನ ಮನೆಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ನಾನು ಎಲ್ಲಾ ಮಾಹಿತಿ ನೀಡಿದ್ದೇನೆ. ಸಾರ್ವಜನಿಕರು ಕೂಡ ತಾಳ್ಮೆಯಿಂದ ನಿಮ್ಮ ಮಾಹಿತಿ ಒದಗಿಸಿಕೊಡಬೇಕು. ಈ ಸಮೀಕ್ಷೆಗೆ ಎಲ್ಲಾ ಜಾತಿ ಸಮುದಾಯದವರು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ – 32 ಲಕ್ಷ ಮನೆ, ಎರಡು ವಾರಗಳ ಟಾರ್ಗೆಟ್
ಹೆಚ್ಚು ಪ್ರಶ್ನೆಗಳಿದ್ದು ಸರಳೀಕರಣ ಮಾಡಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೂಡ ಇಂದೇ ಈ ಪ್ರಶ್ನೆಗಳನ್ನು ನೋಡಿದೆ. ಇವುಗಳನ್ನು ಸರಳೀಕರಣ ಮಾಡಬೇಕಿತ್ತು. ನಗರ ಪ್ರದೇಶದಲ್ಲಿ ಜನರಿಗೆ ತಾಳ್ಮೆ ಕಡಿಮೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಜರಾಯಿಂದ ಬಿಗ್ಶಾಕ್ – 40 ವರ್ಷಗಳಿಂದ ಬೆಂಗ್ಳೂರಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳು ಜಪ್ತಿ
ವೈಯಕ್ತಿಕ ಮಾಹಿತಿಯ ಪ್ರಶ್ನೆಗಳಿಗೆ ಉತ್ತರ ನೀಡಲು ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮೀಕ್ಷೆದಾರರು ಈ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು. ಬೆಂಗಳೂರು ನಗರದಲ್ಲಿ ಸಮೀಕ್ಷೆ ಮಾಡುವಾಗ ಸೂಕ್ಷ್ಮತೆಯಿಂದ ಮಾಡಬೇಕು ಎಂದು ಸಮೀಕ್ಷೆದಾರರಿಗೂ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಅನೇಕರು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಜನರಿಗೆ ತಿಳುವಳಿಕೆ ನೀಡಬೇಕಾದದ್ದು ನಮ್ಮ ಕರ್ತವ್ಯ. ನಾವು ಅದನ್ನು ಮಾಡುತ್ತೇವೆ ಎಂದರಲ್ಲದೇ ಸರ್ವರ್ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿ, ಈ ಸಮಸ್ಯೆ ಸರಿಪಡಿಸ್ತಾರೆ. ಆನ್ಲೈನ್ನಲ್ಲಿ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಅಲ್ಲಿಯೂ ನೀವು ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಮಾಹಿತಿ ನೀಡಿದರೆ ಮತಾಂತರಕ್ಕೆ ಕಾರಣವಾಗಲಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ದೊಡ್ಡವರ ಬಗ್ಗೆ ನಾವೇನು ಹೇಳೋಣ? ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
ರಾಜ್ಯಕ್ಕಾಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮ ತೆರಿಗೆ, ನಮ್ಮ ಹಕ್ಕು. ನಮಗೆ ಈಗ 15 ರಿಂದ 20 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.