ಗ್ರೀನ್ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ – ಪ್ರಚಾರದ ವಿನೂತನ ಪ್ರಯತ್ನ

Public TV
2 Min Read

ರಾಜ್ ವಿಜಯ್ (Raj Vijay) ಹಾಗೂ ಬಿ.ಎನ್ ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ `ಗ್ರೀನ್’ ಚಿತ್ರ (Green Movie) ತೆರೆಗೆ ಬರಲು ಅಣಿಯಾಗಿದೆ. ನಿಶಾಂತ್.ಎನ್.ಎನ್ ಒಡೆತನದ ಹೊಸ ಚಿತ್ರ ನಿರ್ಮಾಣ ಸಂಸ್ಥೆ ಗುನಾದ್ಯ ಪ್ರೊಡಕ್ಷನ್ಸ್ `ಗ್ರೀನ್’ ಚಿತ್ರವನ್ನು ತೆರೆಗೆ ತರಲು ಬೆನ್ನೆಲುಬಾಗಿ ನಿಂತಿದೆ. ಬಿಡುಗಡೆಗೂ ಮುನ್ನ ನವರಾತ್ರಿ ಶುಭ ಸಂದರ್ಭದಲ್ಲಿ ವಿನೂತನ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದೆ.

ಬೆಂಗಳೂರಿನ (Bengaluru) ಹಲವು ಕಡೆ ಒಂದು ಕ್ಯೂಆರ್ ಕೋಡ್ ಇರುವ ಪೋಸ್ಟರ್ ಅಂಟಿಸಲಾಗಿತ್ತು. ಅದನ್ನು ಸ್ಕ್ಯಾನ್ ಮಾಡಿದಾಗ ಗ್ರೀನ್ ಚಿತ್ರದ ಟೀಸರ್ ಬರುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಮೂರು ಸಾವಿರಕ್ಕೂ ಹೆಚ್ಚು ಜನರು ಈ ಕ್ಯೂಆರ್ ಕೋಡ್ ಮೂಲಕ ಚಿತ್ರದ ಟೀಸರ್ ವೀಕ್ಷಿಸಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್

ಇದರ ಜೊತೆಗೆ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಎಂಬ ವಿಶಿಷ್ಟ ಪಾತ್ರವಿದ್ದು, ಆ ಮಾಸ್ಕ್ ಮ್ಯಾನ್ ವೇಷಧಾರಿಯನ್ನು ನಗರದ ನಾಲ್ಕೂ ದಿಕ್ಕಲ್ಲಿ ಸುತ್ತಾಡಲು ಹೇಳಲಾಗಿತ್ತು. ಮಾಸ್ಕ್ ಮ್ಯಾನ್ ವೇಷಧಾರಿಯನ್ನು ಕಂಡ ಕೆಲ ಜನರು ಆಶ್ಚರ್ಯಚಕಿತರಾದರು. ಇನ್ನೂ ಕೆಲವರು ಭಯಭೀತರಾದರು. ಈ ಮಾಸ್ಕ್ ಮ್ಯಾನ್ ಕೇವಲ ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲೂ ಓಡಾಡಿದ್ದಾನೆ. ದಸರಾ ಸಂಭ್ರಮದಲ್ಲಿ ಮುಳುಗಿರುವ ಮೈಸೂರಿನ ಜನ ಹಾಗೂ ಪ್ರವಾಸಿಗರೂ ಸಹ ಮಾಸ್ಕ್ ಮ್ಯಾನ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ ಚಿತ್ರದ ಟೀಸರ್ ಪ್ರಸಾರ ಮಾಡಿಕೊಂಡು ವಾಹನ ಒಂದು ಮೈಸೂರಿನ ತುಂಬಾ ಓಡಾಡಿದೆ. ಒಟ್ಟಿನಲ್ಲಿ ವಿನೂತನ ಪ್ರಚಾರದ ಮೂಲಕ ಚಿತ್ರ ಜನರ ಬಳಿ ತಲುಪುತ್ತಿದೆ. ಇದೇ ತಿಂಗಳಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಘೋಷಿಸಲಿದೆ. ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳ ಜೊತೆಗೆ ಪ್ರಶಂಸೆಯನ್ನು ಈ ಚಿತ್ರ ಪಡೆದುಕೊಂಡಿದೆ.

ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಆರ್.ಜೆ.ವಿಕ್ಕಿ, ವಿಶ್ವನಾಥ್ ಮಾಂಡಲಿಕ, ಶಿವ ಮಂಜು, ಡಿಂಪಿ ಫದ್ಯಾ ಹಾಗೂ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಕೆ.ಮಧುಸೂದನ್ ಛಾಯಾಗ್ರಹಣ ಹಾಗೂ ಶಕ್ತಿ ಅವರ ಸಂಗೀತ ನಿರ್ದೇಶನವಿದೆ. `ಗ್ರೀನ್’ ಒಂದು ಮನೋವೈಜ್ಞಾನಿಕ ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಇದು ವೀಕ್ಷಕರನ್ನು ಮಾನವ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ. ವಿಭಿನ್ನ ಕಥಾಹಂದರ ಹೊಂದಿರುವ ಗ್ರೀನ್ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

Share This Article