ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ (Mysuru Dasara) ಅದ್ಧೂರಿ ತೆರೆ ಬಿದ್ದಿದೆ. 6ನೇ ಬಾರಿಗೆ ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ಮುಗಿಸಿದ್ದು, ಎಲ್ಲಾ ಕಾರ್ಯಗಳು ಅಭೂತಪೂರ್ವ ಯಶಸ್ಸು ಕಂಡಿದೆ.
415ನೇ ದಸರಾ ಮಹೋತ್ಸವದ ಎಲ್ಲಾ ಕಾರ್ಯಗಳಿಗೆ ವಿಧ್ಯುಕ್ತವಾಗಿ ತೆರೆ ಬಿದ್ದಿದ್ದು, ಎಲ್ಲವೂ ಕೂಡ ಸಾಂಪ್ರದಾಯಿಕವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ 11 ದಿನಗಳಿಂದ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವ ಸಂಪನ್ನವಾಗಿದೆ. 22ನೇ ತಾರೀಖು ವಿಜೃಂಭಣೆಯಿಂದ ಆರಂಭಗೊಂಡಿದ್ದ ದಸರಾ ಅನೇಕ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಸಾಗಿ, ಯಶಸ್ವಿ ಜಂಬೂಸವಾರಿಯೊಂದಿಗೆ ತೆರೆ ಬಿದ್ದಿದೆ. ಗುರುವಾರ (ಅ.2) ವಿಜಯದಶಮಿ ಹಿನ್ನೆಲೆ ಬೆಳಗ್ಗೆ 12 ಗಂಟೆಗೆ ಬನ್ನಿ ಪೂಜೆಯೊಂದಿಗೆ ಅರಮನೆ ದಸರಾ ಮುಕ್ತಾಯವಾಯಿತು. ಬಳಿಕ ಸಿಎಂ ನಂದಿಧ್ವಜ ಪೂಜೆ ಬಳಿಕ ಮೆರವಣಿಗೆಗೆ ಚಾಲನೆ ನೀಡಿದರು. ಕಲಾ ತಂಡಗಳು ಮತ್ತು ಆನೆ ಮೆರವಣಿಗೆ ಬಳಿಕ 4.41ಕ್ಕೆ ಸಿಎಂ ಮತ್ತು ಗಣ್ಯರು ಜಂಬೂಸವಾರಿಗೆ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಯಶಸ್ವಿಯಾಗಿ ಜಂಬೂಸವಾರಿ ಹೊತ್ತು ತನ್ನ ಜವಾಬ್ದಾರಿ ಮೆರೆದ.ಇದನ್ನೂ ಓದಿ:ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ
ಇನ್ನೂ ಜಂಬೂಸವಾರಿ ಬಳಿಕ ಬನ್ನಿಮಂಟಪ ಮೈದಾನದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಕೂಡ ದಸರಾ ಮುಕ್ತಾಯ ಪಂಜಿನ ಮೆರವಣಿಗೆಯಲ್ಲಿ ಭಾಗಿಯಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ಕಾರ್ಯಕ್ರಮ ಅಶ್ವದಳ ತಂಡದ ಸಾಹಸ ಪ್ರದರ್ಶನ ಮೈನವಿರೆಳುಸುವಂತಿತ್ತು. ಬಳಿಕ ಅಂತಿಮ ಡ್ರೋಣ್ ಶೋ ನೆರೆದಿದ್ದವರ ಕಣ್ಮನ ತಣಿಸಿತು. ಕೊನೆಯಲ್ಲಿ ಪೊಲೀಸ್ ತಂಡ, ರೈಲ್ವೆ ತಂಡಗಳಿಂದ ಮೂಡಿಬಂದ ಪಂಜಿನ ಕವಾಯತು ನೆರೆದಿದ್ದವರನ್ನ ಮತ್ತಷ್ಟು ರಂಜಿಸಿತು. ಈ ಮೂಲಕ 2025ರ ದಸರಾ ಮಹೋತ್ಸವಕ್ಕೆ ಅದ್ದೂರಿ ತೆರೆ ಬಿತ್ತು
ಒಟ್ಟಾರೆ ಯಶಸ್ವಿಯಾಗಿ ದಸರಾ ಮುಕ್ತಾಯವಾಗಿದ್ದು, ಮುಂದಿನ ನಾಲ್ಕೈದು ದಿನ ನಗರದಲ್ಲಿ ದಸರಾ ಕಲರವ ಮುಂದುವರೆಯಲಿದೆ. ಲೈಟಿಂಗ್ ಸೇರಿದಂತೆ ಹಲವು ಕಾರ್ಯಗಳು ಈ ವಾರ ಪೂರ್ತಿ ಮುಂದುವರೆಯಲಿದೆ.ಇದನ್ನೂ ಓದಿ:ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ