– ಈಗಾಗಲೇ ವೀಸಾ ಹೊಂದಿರುವವರು ಇದು ಅನ್ವಯ ಆಗಲ್ಲ ಎಂದು ಸ್ಪಷ್ಟನೆ
ವಾಷಿಂಗ್ಟನ್: ಹೆಚ್-1ಬಿ ವೀಸಾಗೆ 1 ಲಕ್ಷ ಡಾಲರ್ ಶುಲ್ಕವನ್ನು ಹೊಸ ಅರ್ಜಿದಾರರಿಗೆ ಮಾತ್ರ ವಿಧಿಸಲಾಗುವುದು. ಇದು ಒಂದು ಬಾರಿಯ ಪಾವತಿಯಾಗಿರುತ್ತದೆ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ.
ಶುಕ್ರವಾರ ಶುಲ್ಕ ಹೆಚ್ಚಳವನ್ನು ಘೋಷಿಸಿದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಇದು ವಾರ್ಷಿಕ ಶುಲ್ಕವಾಗಿದೆ. ಹೊಸ ವೀಸಾ ಮತ್ತು ನವೀಕರಣಗಳನ್ನು ಬಯಸುವ ಜನರಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದರು.
ಆದರೆ, ಹೊಸ ನೀತಿ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಶನಿವಾರ ಸ್ಪಷ್ಟೀಕರಣ ನೀಡಿದ್ದಾರೆ. ‘ಇದು ವಾರ್ಷಿಕ ಶುಲ್ಕವಲ್ಲ. ಇದು ಒಂದು ಬಾರಿಯ ಶುಲ್ಕವಾಗಿದೆ. ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ. ನವೀಕರಣಗಳಿಗೆ ಅಲ್ಲ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈಗಾಗಲೇ H-1B ವೀಸಾಗಳನ್ನು ಹೊಂದಿರುವವರು, ಪ್ರಸ್ತುತ ದೇಶದ ಹೊರಗೆ ಇರುವವರಿಗೆ ಮತ್ತೆ ಪ್ರವೇಶಿಸಲು 1 ಲಕ್ಷ ಡಾಲರ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಲೀವಿಟ್ ಸ್ಪಷ್ಟನೆ ನೀಡಿದ್ದಾರೆ.
ಶ್ವೇತಭವನದ ಸ್ಪಷ್ಟೀಕರಣದ ಮೊದಲು, ಅಮೆರಿಕದ ಕಂಪನಿಗಳು ತಮ್ಮ ವಿದೇಶಿ ಉದ್ಯೋಗಿಗಳಿಗೆ ಕೂಡಲೇ ವಾಪಸ್ ಬನ್ನಿ ಎಂದು ಸೂಚನೆ ನೀಡಿದ್ದವು. ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ದೇಶವನ್ನು ತೊರೆಯದಂತೆ ಸೂಚಿಸಿದ್ದವು ಎಂದು ವರದಿಯಾಗಿದೆ.
H-1B ವೀಸಾಗಳು ಕಂಪನಿಗಳು ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್‌ಗಳಂತಹ ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ಕಾರ್ಮಿಕರನ್ನು ಅಮೆರಿಕದಲ್ಲಿ ಕೆಲಸ ಮಾಡಲು ಪ್ರಾಯೋಜಿಸಲು ಅವಕಾಶ ನೀಡುತ್ತವೆ, ಆರಂಭದಲ್ಲಿ ಮೂರು ವರ್ಷಗಳವರೆಗೆ ಆದರೆ ಆರು ವರ್ಷಗಳವರೆಗೆ ವಿಸ್ತರಿಸಬಹುದು.
